ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿ ಹನೂರಿನಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಹನೂರು: ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಆರ್‌ಸಿಬಿ ತಂಡ ವಿಜಯೋತ್ಸವ ಆಚರಿಸುವ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿ 56 ಮಂದಿ ಗಾಯಗೊಂಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಮಂತ್ರಿ ಪರಮೇಶ್ವರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಚಾಮರಾಜನಗರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ ಒತ್ತಾಯಿಸಿದರು.
ಹನೂರು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ರಾಯಲ್ ಚಾಲೆಂಜರ್ಸ್ ಆರ್‌ಸಿಬಿ ವಿಜಯೋತ್ಸವ ಆಚರಿಸಲು ರಾಜ್ಯ ಸರ್ಕಾರವೇ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿಮಾನಿಗಳಿಗೆ ಟಿಕೆಟ್ ಇಲ್ಲದೆ ಉಚಿತ ಎಂದು ತಿಳಿಸಿದ ನಂತರ ಲಕ್ಷಾಂತರ ಅಭಿಮಾನಿಗಳು ಜಮಾವಣೆಗೊಂಡು, ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಹ ಇದು ಸರಿಯಾದ ಕ್ರಮವಲ್ಲ ಕಾರ್ಯಕ್ರಮ ಮಾಡುವುದು ಒಳಿತಲ್ಲ ಎಂದು ತಿಳಿಸಿದ ನಂತರವೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು 56 ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ. ಹೀಗಾಗಿ ಸರ್ಕಾರ ಪೊಲೀಸರನ್ನು ನೇರ ಹೊಣೆ ಮಾಡಿ ದಕ್ಷ ಪ್ರಾಮಾಣಿಕ ಅಧಿಕಾರಿ ದಯಾನಂದ್ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಪಡಿಸುವ ಮೂಲಕ ಅವೈಜ್ಞಾನಿಕ ಕ್ರಮವನ್ನು ಅನುಸರಿಸಿದೆ. ಹೀಗಾಗಿ ರಾಜ್ಯ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಲೋಕೇಶ್ ಜತ್ತಿ, ಅರಕಲವಾಡಿ ನಾಗೇಂದ್ರ, ಹನೂರು ಪುಟ್ಟರಾಜು, ದೊಡ್ಡ ಮಾದಪ್ಪ, ಸುಂದರಪ್ಪ, ಕೃಷ್ಣೇಗೌಡ, ಉಪಸಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.