ಅನುಗ್ರಹಿಸಿದ ವರುಣ: ರೈತರ ಮೊಗದಲ್ಲಿ ಅರಳಿದ ನಗು

KannadaprabhaNewsNetwork |  
Published : Aug 17, 2026, 02:30 AM IST
ರಾಣಿಬೆನ್ನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆವಣಿಗೆ ಹೊಂದುತ್ತಿರುವ ಫಸಲು  | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಮಳೆಯಿಲ್ಲದೆ ಕಂಗಾಲಾಗಿದ್ದ ಅನ್ನದಾತನಿಗೆ, ಪ್ರಕೃತಿ ಮಾತೆ ಈಗ ಕರುಣೆ ತೋರಿದ್ದಾಳೆ. ವರುಣ ದೇವನ ಕೃಪೆಯಿಂದಾಗಿ ಉತ್ತಮ ಮಳೆಯಾಗುತ್ತಿದ್ದು, ನಿರಾಸೆಯಲ್ಲಿದ್ದ ರೈತರ ಮೊಗದಲ್ಲಿ ಕೊನೆಗೂ ಮಂದಹಾಸ ಮೂಡಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ತಾಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಮಳೆಯಿಲ್ಲದೆ ಕಂಗಾಲಾಗಿದ್ದ ಅನ್ನದಾತನಿಗೆ, ಪ್ರಕೃತಿ ಮಾತೆ ಈಗ ಕರುಣೆ ತೋರಿದ್ದಾಳೆ. ವರುಣ ದೇವನ ಕೃಪೆಯಿಂದಾಗಿ ಉತ್ತಮ ಮಳೆಯಾಗುತ್ತಿದ್ದು, ನಿರಾಸೆಯಲ್ಲಿದ್ದ ರೈತರ ಮೊಗದಲ್ಲಿ ಕೊನೆಗೂ ಮಂದಹಾಸ ಮೂಡಿದೆ.

ಕಂಗಾಲಾಗಿದ್ದ ಅನ್ನದಾತ:ಕಳೆದ ಕೆಲವು ವರ್ಷಗಳಲ್ಲಿ ವಾಯುಗುಣ ವೈಪರೀತ್ಯ ಹಾಗೂ ಸಕಾಲಕ್ಕೆ ಮಳೆಯಾಗದ ಕಾರಣ ಕೃಷಿ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದರು. ಬಾವಿ, ಬೋರ್‌ವೆಲ್‌ಗಳು ಬತ್ತಿ ಹೋಗಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಸಾಲದ ಹೊರೆ ಮತ್ತು ಭವಿಷ್ಯದ ಆತಂಕದಿಂದ ಕೃಷಿಕರು ಕಂಗೆಟ್ಟಿದ್ದರು.

ವರುಣನ ಆಗಮನ–ಹೊಸ ಭರವಸೆ: ಆದರೆ ಈ ಬಾರಿ ಸ್ವಲ್ಪ ತಡವಾಗಿ ವರುಣ ದೇವ ಭೂಮಿಗೆ ಇಳಿದು ಬಂದಿದ್ದು ರಭಸವಾಗಿಲ್ಲದಿದ್ದರೂ ಹದ ಮಳೆಯಗುತ್ತಿದೆ. ತಾಲೂಕಿನಲ್ಲಿ ನದಿಗಳು ತುಂಬಿ ತುಳುಕುತ್ತಿವೆ. ಈ ಭಾಗದ ಆಶಾಕಿರಣವಾಗಿರುವ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ತುಂಬಿ ಹರಿಯುತ್ತಿದೆ. ಇದರಿಂದ ತಾಲೂಕಿನ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಲಿದೆ. ಈ ದೃಶ್ಯವನ್ನು ಕಂಡ ರೈತರ ಮನಸ್ಸಿನಲ್ಲಿ ಹೊಸ ಭರವಸೆಯ ಕಿರಣ ಮೂಡಿದೆ. ತಾಲೂಕಿನಲ್ಲಿ ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆ ಮಳೆ 73.40 ಮಿ.ಮೀ. ಇದ್ದು ಇಂದಿನವರೆಗೂ 25.34 ಮಿ.ಮೀ. ಮಳೆಯಾಗಿದೆ.

ಕೆರೆಗಳಿಗೆ ನೀರು ತುಂಬಿಸಬೇಕು:ತಾಲೂಕಿನಲ್ಲಿ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ. ಆದ್ದರಿಂದ ತಾಲೂಕಿನ ಎಲ್ಲಾ ಕೆರೆಗಳಿಗೂ ನದಿಗಳಿಂದ ನೀರು ತುಂಬಿಸುವ ಕೆಲಸವಾಗಬೇಕು. ಹೀಗಾದಲ್ಲಿ ರೈತರು ನೀರಾವರಿ ಕೈಗೊಳ್ಳಲು ಸಾಕಷ್ಟು ಅನುಕೂಲವಾಗಲಿದೆ.

ಬಿತ್ತನೆ ಕ್ಷೇತ್ರ: ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ 51266 (ಮಳೆ ಆಶ್ರಿತ 38348, ನೀರಾವರಿ 12918) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದ್ದು, ಆ ಪೈಕಿ ಪ್ರಸಕ್ತ ಸಾಲಿನಲ್ಲಿ 52143 (ಮಳೆ ಆಶ್ರಿತ 40900, ನೀರಾವರಿ 11243) ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಚುರುಕುಗೊಂಡ ಕೃಷಿ ಚಟುವಟಿಕೆಗಳು: ಮಳೆ ಬೀಳುತ್ತಿದ್ದಂತೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿ, ನೇಗಿಲು ಹಿಡಿದು ಹೊಲಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ಇಡೀ ಕುಟುಂಬವೇ ಸಂಭ್ರಮದಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಒಣಗುತ್ತಿದ್ದ ವಾಣಿಜ್ಯ ಬೆಳೆಗಳು ಹಾಗೂ ಆಹಾರ ಧಾನ್ಯಗಳ ಸಸಿಗಳಿಗೆ ಈ ಮಳೆ ಅಮೃತಧಾರೆಯಾಗಿದೆ. ಭೂಮಿಯ ಒಡಲು ತಂಪಾಗಿದೆ, ಅನ್ನದಾತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಮುನ್ಸೂಚನೆ ಕಾಣಿಸುತ್ತಿದೆ. ವರುಣನ ಅನುಗ್ರಹದಿಂದಾಗಿ ರೈತರು ಈ ಬಾರಿ ಬಂಪರ್ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ ಜೂನ್, ಜುಲೈ ತಿಂಗಳಿನಲ್ಲಿ ಪ್ರತಿ ಸಲಕ್ಕಿಂತ ಕಡಿಮೆ ಮಳೆಯಾಗಿದ್ದರಿಂದ ಆತಂಕ ಉಂಟಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿದ ಫಸಲು ಕೈಗೆ ಬರುವ ನಿರೀಕ್ಷೆಯಿದೆ ಎಂದು ರಾಣಿಬೆನ್ನೂರು ಪ್ರಗತಿಪರ ರೈತ ಚಂದ್ರಶೇಖರ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ