ಕನ್ನಡಪ್ರಭ ವಾರ್ತೆ ವಿಜಯಪುರ
ಬಿಎಲ್‌ಒಗಳು ಏನು ಮಾಡಬೇಕು?:ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಕುರಿತು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ಬಿಎಲ್‌ಒಗಳಿಗೆ ಸಂಪೂರ್ಣವಾಗಿ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಯೂ ಮತದಾರರ ಮನೆಗಳಿಗೆ ತೆರಳಿ ಎನ್ಯೂಮರೇಷನ್ ಫಾರ್ಮ್ ನೀಡಿ, ಅವುಗಳನ್ನು ಭರ್ತಿ ಮಾಡುವ ಕುರಿತು ಮಾಹಿತಿ ನೀಡಬೇಕು. ಈಗಾಗಲೇ ಮ್ಯಾಪಿಂಗ್ ಮಾಡಲಾಗಿರುವ ಕುರಿತು ತಪಾಸಣೆ ನಡೆಸಿ, ಅದರ ಕುರಿತು ತಿಳಿವಳಿಕೆ ಒದಗಿಸಬೇಕು. ಬಳಿಕ ಫಾರ್ಮ್‌ಗಳನ್ನು ಭರ್ತಿ ಮಾಡಿಸಿಕೊಂಡು, ಎರಡೂ ಫಾರ್ಮ್‌ಗಳಲ್ಲಿ ಮತದಾರ ಹಾಗೂ ಚುನಾವಣಾಧಿಕಾರಿ ಸಹಿ ಮಾಡಿ, ಒಂದನ್ನು ಮತದಾರನಿಗೆ ಮತ್ತೊಂದನ್ನು ತಮ್ಮ ಬಳಿಗೆ ಇಟ್ಟುಕೊಳ್ಳಬೇಕು.
ಬಿಎಲ್‌ಒಗಳು ಮಾಡುತ್ತಿರುವುದೇನು?: ಅಂಗನವಾಡಿ ಹಾಗೂ ಸರ್ಕಾರಿ ಶಾಲಾ ಶಿಕ್ಷಕರು ಬಿಎಲ್‌ಒಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಬಹುತೇಕರು ಕುಳಿತಲ್ಲೇ ಕೆಲಸ ಮಾಡುತ್ತಿದ್ದಾರೆ. ಉದಾಹರಣೆಗಾಗಿ ಇಂಡಿ ನಗರದಲ್ಲಿನ ಕಲ್ಯಾಣ ಮಂಟಪದಲ್ಲಿ, ಉಕ್ಕಲಿಯ ಸರಕಾರಿ ಶಾಲೆಯಲ್ಲಿ, ವಿಜಯಪುರ ನಗರದ ಹರಣ ಶಿಕಾರಿ ಕಾಲೋನಿಗಳಲ್ಲಿನ ಶಾಲೆಗಳು ಹಾಗೂ ದೇವಸ್ಥಾನಗಳಲ್ಲಿ, ಇಂಡಿ ತಾಲೂಕಿನ ತಡವಲಗಾ ಗ್ರಾಮದ ದೇವಸ್ಥಾನದಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೀತಿಯಾಗಿ ಎಸ್‌ಐಆರ್ ಕಾರ್ಯ ನಡೆದಿದೆ.ಇದರಿಂದಾಗುವ ಸಮಸ್ಯೆಗಳೇನು?:ಬಡವರು ತಮ್ಮ ಕೆಲಸ ಬಿಟ್ಟು ಬಂದು ಇವರ ಬಳಿ ನಿಲ್ಲಬೇಕಾಗುತ್ತದೆ. ಒಂದೇ ಕಡೆ ಕುಳಿತು ಪರಿಷ್ಕರಣೆ ಮಾಡುವುದರಿಂದ ಪ್ರತಿಯೊಬ್ಬರ ಮಾಹಿತಿ ಸಿಗುವುದಿಲ್ಲ. ಬಿಎಲ್‌ಒಗಳು ಬಂದಿರುವ ಕುರಿತು ಎಲ್ಲ ಮತದಾರರಿಗೂ ಮಾಹಿತಿ ಸಿಗುವುದಿಲ್ಲ. ವಿಕಲಚೇತನರು, ಇಳಿ ವಯಸ್ಸಿನವರು, ಕೂಲಿಕಾರರಿಗೆ ಇದು ತೀವ್ರ ಸಮಸ್ಯೆಯಾಗಲಿದೆ. ಒಂದಲ್ಲದೆ ಮೂರು ಬಾರಿ ಮತದಾರರ ಮನೆಗೆ ಬಿಎಲ್‌ಒಗಳು ಹೋಗಿ ಈ ಕಾರ್ಯವನ್ನು ಮಾಡಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ನಿಯಮ ಪಾಲಿಸದೇ, ಬಿಎಲ್‌ಒಗಳು ದೇವಸ್ಥಾನಗಳು, ಮಂಗಲ ಕಾರ್ಯಾಲಯಗಳು ಹಾಗೂ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಕುಳಿತುಕೊಂಡೇ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ಧಾರೆ. ಇದರಿಂದ ವೃದ್ಧರು, ಮಹಿಳೆಯರು, ಅಂಗವಿಕಲರು ಹಾಗೂ ಕೂಲಿ ಕಾರ್ಮಿಕರಿಗೆ ಅನಗತ್ಯ ತೊಂದರೆಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ನಡೆಯುತ್ತಿರುವ ಈ ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
ಎಸ್‌ಐಆರ್ ಪ್ರಕ್ರಿಯೆಯನ್ನು ಮತದಾರರ ಮನೆಗಳಿಗೇ ತೆರಳಿ ಪೂರ್ಣಗೊಳಿಸಬೇಕೆಂದು ಈಗಾಗಲೇ ಎಲ್ಲ ಬಿಎಲ್‌ಒಗಳಿಗೆ ಸೂಚಿಸಲಾಗಿದೆ. ಮನೆಗಳಿಗೆ ತೆರಳಿ ಫಾರ್ಮ್ ಕೊಟ್ಟ ಬಳಿಕ ಒಂದೆಡೆ ಕುಳಿತು ಅವುಗಳನ್ನು ಮ್ಯಾಪಿಂಗ್ ಮಾಡುವ ಕಾರ್ಯ ಮಾಡುತ್ತಿರಬಹುದು. ಕೆಲವುಕಡೆ ನೆಟವರ್ಕ್ ಸಿಗದಿರುವುದರಿಂದ ಒಂದೆಡೆ ಕುಳಿತಿರಬಹುದು. ಆದರೂ ಸಹ ಚುನಾವಣೆ ಆಯೋಗದ ನಿಯಮದಂತೆ ಪ್ರತಿ ಬಿಎಲ್‌ಒ ಮತದಾರನ ಮನೆಗೆ ತೆರಳುವುದು ಕಡ್ಡಾಯವಾಗಿದೆ. ಇನ್ನೊಮ್ಮೆ ಎಲ್ಲ ಬಿಎಲ್‌ಒಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗುವುದು.