ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ರಸ್ತೆ ತಡೆ ನಡೆಸಲಾಯಿತು. ಸಮಾಜಕ್ಕೆ ಮೀಸಲಾತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು. ಇಷ್ಟು ದಿನ ಧರಣಿ, ಉಪವಾಸ ಸತ್ಯಾಗ್ರಹ ನಡೆಸಿದ್ದ ಸಮಾಜದ ಮುಖಂಡರು, ಇದೀಗ ಇಷ್ಟಲಿಂಗ ಮೂಲಕದ ಹಕ್ಕೊತ್ತಾಯ ಸಲ್ಲಿಸಲು ಮುಂದಾಗಿದ್ದಾರೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಈ ರೀತಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೆದ್ದಾರಿ ತಡೆದಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಪಿಬಿ ರಸ್ತೆ -4 ರ ಗಬ್ಬೂರಲ್ಲಿ ಇಷ್ಟಲಿಂಗ ಪೂಜೆ ಹಾಗೂ ಸಮಾವೇಶ ನಡೆಸುವ ಮೂಲಕ ಹೆದ್ದಾರಿ ತಡೆದರು.
ಇದಕ್ಕೂ ಮುನ್ನ ಇಲ್ಲಿನ ಚೆನ್ನಮ್ಮ ಸರ್ಕಲ್‌ನಿಂದ ಆರಂಭವಾದ ಬೈಕ್ ರ್‍ಯಾಲಿಗೆ ಶಾಸಕ ಎಂ.ಆರ್. ಪಾಟೀಲ ಚಾಲನೆ ನೀಡಿದರು. ಬಳಿಕ ಬಂಕಾಪುರ ಚೌಕದಿಂದ ಗಬ್ಬೂರ ಸರ್ಕಲ್ ವರೆಗೂ ಪಾದಯಾತ್ರೆ ಮೂಲಕ ತೆರಳಿದ ಪ್ರತಿಭಟನಾಕಾರರು, ಸುಮಾರು 2 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದರು.ಈ ವೇಳೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಆಯಾ ಜಿಲ್ಲಾ ಮಟ್ಟದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹಕ್ಕೊತ್ತಾಯ ಮಾಡಲಾಗುತ್ತಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಈ ರೀತಿ ಮಾಡಲಾಗಿದೆ. ಇನ್ನುಳಿದ 25 ಜಿಲ್ಲೆಗಳಲ್ಲೂ ಇಷ್ಟಲಿಂಗ ಪೂಜೆ ಮೂಲಕ ಹಕ್ಕೋತ್ತಾಯ ಮಾಡಲಾಗುವುದು. ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಇಷ್ಟಲಿಂಗ ಪೂಜೆ ಮಾಡುತ್ತೇವೆ. ಪ್ರಾಣಹೋದರೂ ಹೋರಾಟ ನಿಲ್ಲಿಸುವುದಿಲ್ಲ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುವುದು ಎಂದು ಎಚ್ಚರಿಕೆ ನೀಡಿದರು.
ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮೀಸಲಾತಿ ಅನುಷ್ಠಾನ ಆಗಿಲ್ಲ. ಈ ಸರ್ಕಾರ ಬೇಡಿಕೆ ಈಡೇರಿಸಬೇಕು. ಇಷ್ಟೆಲ್ಲ ಹೋರಾಟ ನಡೆಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕೂ ಕರೆದು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮೀಸಲಾತಿ ನೀಡದ ಬಿಜೆಪಿಗೆ ಪಾಠ ಕಲಿಸಿದ್ದೇವೆ. ಈಗ ಕಾಂಗ್ರೆಸ್ ಕೂಡ ಅದೇ ರೀತಿ ಮಾಡಿದರೆ ಅದಕ್ಕೂ ಪಾಠ ಕಲಿಸಬೇಕಾಗುತ್ತದೆ ಎಂದರು.ಪಂಚಮಸಾಲಿ ಸಮಾಜವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೆಲದುಷ್ಟ ಮನಸ್ಸುಗಳು ನಮಗೆ ಮೀಸಲಾತಿ ಸಿಗದಂತೆ ತಡೆ ಹಿಡಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಡಿಕೆ ಈಡೇರಿಸಬೇಕು. ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ಹಾಗೂ ಲಿಂಗಾಯತ ಉಪಜಾತಿಗಳ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಸಮಾಜಕ್ಕೆ ಯಾವ ಪಕ್ಷ ಮಾನ್ಯತೆ ನೀಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ. ನ್ಯಾಯ ಒದಗಿಸುವವರ ವಿರುದ್ಧ ಅಸಮಾಧಾನಗೊಳ್ಳುವುದು ನಮ್ಮ ಸಮಾಜಕ್ಕೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಶ್ರೀಗಳು ವೇದಿಕೆಯ ಮೇಲೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದರು. ಕೆಲ ಹೋರಾಟಗಾರರು ರಸ್ತೆಯಲ್ಲೇ ಕುಳಿತು ಇಷ್ಟಲಿಂಗ ಪೂಜೆ ನೆರವೇರಿಸಿದರು.ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಜಿಲ್ಲಾಧ್ಯಕ್ಷ ನಿಂಗಣ್ಣ ಕರಿಕಟ್ಟಿ, ವಾಯವ್ಯ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸಮಾಜದ ಮುಖಂಡರಾದ ವೀರೇಶ ಉಂಡಿ, ರಾಜಶೇಖರ ಮೆಣಸಿನಕಾಯಿ, ಷಣ್ಮುಖ ಗುರಿಕಾರ, ದೀಪಾ ಗೌರಿ, ಬಾಪುಗೌಡ, ಸಿದ್ದು ಹಂಡೇದ, ಸಮಾಜ ಸೇವಕ ರಾಜು ಕೊಟಗಿ, ಶಶಿ ಶೇಖರ ಡಂಗನವರ, ಶಂಕರ ಮಲಕಣ್ಣವರ, ವೀರಣ್ಣ ನೀರಲಗಿ, ರವಿರಾಜ ಕೊಡ್ಲಿ, ಸಂಗೀತಾ ಇಜಾರದ, ಜಿ.ಜಿ.ದ್ಯಾವನಗೌಡ್ರ, ಸತೀಶ ನೂಲ್ವಿ, ಸುವರ್ಣಲತಾ ಗದಿಗೆಪ್ಪಗೌಡರ ಸೇರಿದಂತೆ ಸಾವಿರಾರು ಸಮಾಜ ಬಾಂಧವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಮೊಬೈಲ್ ಮೂಲಕ ಸಚಿವರಿಂದ ಆಲಿಕೆಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪ್ರತಿಭಟನೆ ನಡೆದ ವೇಳೆಯೇ ಕೂಡಲಸಂಗಮ ಶ್ರೀಗಳಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.