28ಕ್ಕೆ ಚನ್ನಗಿರಿಯಲ್ಲೇ ವಾಲ್ಮೀಕಿ ಜಯಂತಿ ಆಚರಿಸಲು ಜಿಲ್ಲಾಡಳಿತಕ್ಕೆ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆಚನ್ನಗಿರಿ ಪಟ್ಟಣದ ಬೀರೂರು ಕ್ರಾಸ್‌ನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಏಕಾಏಕಿ ತೆರವುಗೊಳಿಸಿದ್ದು ಖಂಡನೀಯ. ಪುರಸಭೆಯೇ ಮುಂದೆ ನಿಂತು, ಮತ್ತೆ ಪುತ್ಥಳಿ ಪ್ರತಿಷ್ಠಾಪಿಸಿ, ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಚನ್ನಗಿರಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನಾ ಹೋರಾಟ ಸಮಿತಿ ಎಚ್ಚರಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ, ಕಳೆದ ಒಂದೂವರೆ ದಶಕದಿಂದಲೂ ಚನ್ನಗಿರಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದ ವೃತ್ತದಲ್ಲಿ ಶ್ರೀ ವಾಲ್ಮೀಕಿ ವೃತ್ತವೆಂಬ ನಾಮಫಲಕ ಹಾಕಿದ್ದು, ಈಗ ಅಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿದ್ದು ತೆರವುಗೊಳಿಸಿದ ಪುರಸಭೆ ನಡೆಯನ್ನು ತೀವ್ರವಾಗಿ ಖಂಡಿಸಿದರು.ಇಂದಿಗೂ ಚನ್ನಗಿರಿ ಜನತೆ ವಾಲ್ಮೀಕಿ ವೃತ್ತ ಅಂತಲೇ ಗುರುತಿಸುತ್ತಾರೆ. ಇಂತಹ ವೃತ್ತಕ್ಕೆ ಕೆಲವರು ಶ್ರೀ ಮುರುಘ ರಾಜೇಂದ್ರ ವೃತ್ತವೆಂದು ನಾಮಕರಣ ಮಾಡಲು ಕೆಲವು ಪ್ರಯತ್ನಿಸುತ್ತಿರುವುದು ಖಂಡನೀಯ. ಅ.10ರಂದು ಪ್ರತಿಷ್ಠಾಪಿಸಿದ್ದ ವಾಲ್ಮೀಕಿ ಮೂರ್ತಿಯನ್ನು ಪೊಲೀಸ್ ಇಲಾಖೆ, ಪುರಸಭೆ ಅಧಿಕಾರಿಗಳು, ತೆರವು ಮಾಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಚನ್ನಗಿರಿ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದ ಹೆಸರು ಬದಲಾವಣೆ ಮಾಡುವುದು, ವಾಲ್ಮೀಕಿ ಪುತ್ಥಳಿಗೆ ಮರು ಪ್ರತಿಷ್ಠಾಪಿಸಲು ತಡೆಯೊಡ್ಡುವ ಯಾವುದೇ ರಾಜಕೀಯ ಒತ್ತಡ, ಪ್ರಭಾವ, ವ್ಯಕ್ತಿಗಳ ವಿರುದ್ಧವೂ ಸಮಾಜ ಹೋರಾಟ ನಡೆಸಲಿದೆ. ಈ ಮಧ್ಯೆ ರಾಜಕೀಯ ಶಕ್ತಿ ಬಳಸಿ, ಪುರಸಭೆಯಲ್ಲಿ ಶ್ರೀ ಮುರುಘರಾಜೇಂದ್ರ ವೃತ್ತವೆಂದು ಒಂದು ವೇಳೆ ನಾಮಕರಣ ಮಾಡಲು ನಿರ್ಣಯಿಸಿದರೆ,ತೀವ್ರ ಹೋರಾಟ ನಡೆಸಲಾಗುವುದು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಸೂಚ್ಯವಾಗಿ ತಿಳಿಸಿದರು.ಸಮಿತಿ ಮುಖಂಡರಾದ ಎಂ.ಬಿ.ಹಾಲಪ್ಪ ಹದಡಿ, ಶಾಬನೂರು ಪ್ರವೀಣ, ವಿಜಯಶ್ರೀ, ಪಾರ್ವತಿ, ಗುಮ್ಮನೂರು ಬಸವರಾಜ, ಶ್ಯಾಗಲೆ ಸತೀಶ, ಅಣಜಿ ಅಂಜಿನಪ್ಪ, ಕರೂರು ಹನುಮಂತ, ಹೂವಿನಮಡು ನಾಗರಾಜ, ಎಸ್.ಎ.ಲಿಂಗರಾಜ, ಗುಮ್ಮನೂರು ಶ್ರೀನಿವಾಸ ಇತರರಿದ್ದರು.
................ಅ.28ರಂದು ಮಹರ್ಷಿ ವಾಲ್ಮೀಕಿ ಜಯಂತಿ ಇದ್ದು, ಅದರ ಪೂರ್ವದಲ್ಲಿ ವಾಲ್ಮೀಕಿ ಪುತ್ಥಳಿಯ ಚನ್ನಗಿರಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಷ್ಠಾಪಿಸಿ, ನಾಮಕರಣದ ಫಲಕ ಅನಾವರಣಗೊಳಿಸಬೇಕು. ಜಿಲ್ಲಾಡಳಿತದಿಂದ ಈ ಬಾರಿಯ ವಾಲ್ಮೀಕಿ ಜಯಂತಿಯ ಚನ್ನಗಿರಿಯಲ್ಲೇ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಿದ್ದೇವೆ. ಅಲ್ಲದೇ, ವಾಲ್ಮೀಕಿ ಪುತ್ಥಳಿ ಹೋರಾಟ ಬೆಂಬಲಿಸಿ ನೂರಾರು ವಾಹನಗಳಲ್ಲಿ ಚನ್ನಗಿರಿಗೆ ತೆರಳಿ, ಹೋರಾಟಕ್ಕೆ ಬೆಂಬಲಿಸುತ್ತಿದ್ದೇವೆ.
ಹುಚ್ಚವ್ವನಹಳ್ಳಿ ಮಂಜುನಾಥ, ನಾಯಕ ಸಮಾಜದ ಮುಖಂಡ.