ರಾಜ್ಯ, ಹೊರ ರಾಜ್ಯದ ವೈದ್ಯರ ಆಗಮನ । ವೈದ್ಯಕೀಯ ಕ್ಷೇತ್ರದಲ್ಲಿನ ವಿನೂತನ ತಂತ್ರಜ್ಞಾನ, ಬೆಳವಣಿಗೆ ಕುರಿತು ಪ್ರಬಂಧ ಮಂಡನೆ ಕನ್ನಡಪ್ರಭ ವಾರ್ತೆ ಬೀದರ್ ಇದೇ ಅ. 27ರಿಂದ 29ರವರೆಗೆ ಮೂರು ದಿನಗಳ ಕಾಲ ನಗರದಲ್ಲಿ ಪ್ರಥಮ ಬಾರಿಗೆ ಐಎಂಎ 89ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ತಜ್ಞ ವೈದ್ಯರು ಪಾಲ್ಗೊಂಡು ವೈದ್ಯಕೀಯ ಕ್ಷೇತ್ರದಲ್ಲಿನ ವಿನೂತನ ತಂತ್ರಜ್ಞಾನ, ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಹಿರಿಯ ತಜ್ಞ ವೈದ್ಯ ಡಾ. ಚಂದ್ರಕಾಂತ ಗುದಗೆ ತಿಳಿಸಿದರು. ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ರಾಜ್ಯದ ಪರಿಸರ, ಜೀವಶಾಸ್ತ್ರ, ಅರಣ್ಯ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗುದಗೆ ತಿಳಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ವಿವಿಧ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ನಡೆಯಲಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುವಂಥ ಅನೇಕ ವಿಷಯಗಳನ್ನು ಚರ್ಚಿಸಲಾಗುತ್ತದೆ. ಹೃದಯ ಸ್ಥಂಭನದ ಸಂದರ್ಭದಲ್ಲಿ ರೋಗಿಯ ಜೀವ ಉಳಿಸಲು ಮಾಡಬೇಕಾದ ತಕ್ಷಣ ಕ್ರಮಗಳು, ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ತಪ್ಪಿಸಿ ಉತ್ತಮ ಆರೋಗ್ಯ ಕಲ್ಪಿಸುವಂಥ ಅನೇಕ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ವೈದ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ವೈಜ್ಞಾನಿಕ ಉಪನ್ಯಾಸಗಳನ್ನು ನೀಡಲಿದ್ದಾರೆ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ವೈದ್ಯರು, ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪ್ರಬಂಧ ಪ್ರಸ್ತುತಪಡಿಸಲು ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಸಮ್ಮೇಳನದ ಇನ್ನೋರ್ವ ಸಂಘಟನಾ ಅಧ್ಯಕ್ಷೆ ಡಾ. ವಿಜಯಶ್ರೀ ಬಶೆಟ್ಟಿ ಮಾತನಾಡಿ, ವೈದ್ಯಕೀಯ ಸಮ್ಮೇಳನದ ಗುರಿಗಳು ಮತ್ತು ಉದ್ದೇಶಗಳು ಮುಂದುವರಿದ ವೈದ್ಯಕೀಯ ಶಿಕ್ಷಣವನ್ನು ನೀಡುವುದು ಮತ್ತು ಒಟ್ಟುಗೂಡಿದ ಪ್ರತಿನಿಧಿಗಳಿಗೆ ಇತ್ತೀಚಿನ ವೈದ್ಯಕೀಯ ಜ್ಞಾನವನ್ನು ಪ್ರಸಾರ ಮಾಡುವುದು ಸಮ್ಮೇಳನದ ಉದ್ದೇಶವಾಗಿದೆ. ಡಾ. ವಿಜಯಕುಮಾರ ಕೋಟೆ ಮಾತನಾಡಿ, ಸಮ್ಮೇಳನದಲ್ಲಿ ಬೀದರ್ ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅವಕಾಶಗಳು ಮತ್ತು ಭವಿಷ್ಯದ ಸವಾಲುಗಳ ಕುರಿತಾಗಿಯೂ ಚರ್ಚಿಸಲಾಗುತ್ತದೆ. ಮೂರು ದಿನಗಳ ಈ ಕಾರ್ಯಕ್ರಮವನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡುವ ಮೂಲಕ ಸಾರ್ಜಜನಿಕರಿಗೂ ತಲುಪಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದರು. ಡಾ. ವಿ.ವಿ. ನಾಗರಾಜ ಅವರು ಮಾತನಾಡಿ, ಸಮ್ಮೇಳನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ವಿನೂತನ ಆವಿಷ್ಕಾರಗಳು ಹಾಗೂ ಬೆಳವಣಿಗೆಗಳ ಕುರಿತಾಗಿ ಚರ್ಚೆಗಳು ನಡೆದು ಇಂದಿನ ವೈದ್ಯರಿಗೆ ಅನುಕೂಲ ಕಲ್ಪಿಸುವ ಪ್ರಯತ್ನಗಳು ನಡೆಯಲಿವೆ ಎಂದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಪನಶೆಟ್ಟಿ, ಉಪಾಧ್ಯಕ್ಷರಾದ ಡಾ. ಆರ್. ಜಾಧವ್, ಡಾ. ವಿಎಸ್ ಮಠಪತಿ, ಡಾ. ಶಶಿಕಾಂತ ಹಾರಕೂಡ, ಡಾ. ಉಮಾ ದೇಶಮುಖ, ಡಾ.ಮಕ್ಸೂದ್ ಚಂದಾ, ಡಾ. ಹಣಮಶೆಟ್ಟಿ, ಡಾ. ಭಗವಾನ, ಡಾ. ವಿಎಸ್ ನಿಂಬೂರ್, ಐಎಂಎ ಅಧ್ಯಕ್ಷರಾದ ಡಾ. ಮದನಾ ವೈಜಿನಾಥ, ಮಾಜಿ ಅಧ್ಯಕ್ಷ ಡಾ. ಸಿ. ಆನಂದರಾವ್, ಡಾ. ವೈಜಿನಾಥ ತುಗಾಂವೆ, ಡಾ. ಅನೀಲ ತಳವಾಡೆ ಸೇರಿದಂತೆ ಮತ್ತಿತರರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.