ಅರಸೀಕೆರೆ: ಬಾಣಾವರ ಯೂತ್ ಕವರೇಜ್ ಗ್ರೂಪ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಸುಲ್ತಾನ್ ಜಯಂತಿಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ, ದಂತ ತಪಾಸಣೆ, ರಕ್ತ ಗುಂಪು ಪರೀಕ್ಷೆ ಹಾಗೂ ರಕ್ತದಾನ ಶಿಬಿರವನ್ನು ಬಾಣಾವರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಿ.ವೈ.ಸಿ. ಗ್ರೂಪ್‌ನ ಮಹಮ್ಮದ್ ಅಯೂಬ್ ಮಾತನಾಡಿ, ಯುವಕರು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುವ ಮಹಾನ್ ಕಾಯಕದಲ್ಲಿ ಭಾಗಿಯಾಗಬೇಕು. ಸಮಾಜ ಸುಧಾರಣೆಗೆ ಆರೋಗ್ಯವೇ ಆಧಾರ. ಜೀವನದಲ್ಲಿ ಎಷ್ಟೇ ಜಂಜಾಟಗಳಿದ್ದರೂ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕ ಎಂದು ತಿಳಿಸಿದರು. ಆರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳ ಮಹತ್ವವನ್ನು ವಿವರಿಸಿ, ಯುವಕರು ಇಂತಹ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಿದರೆ ವೃದ್ಧರು ಹಾಗೂ ಸಾರ್ವಜನಿಕರಿಗೆ ಅಪಾರ ಲಾಭ ಎಂದರು.
ಮುಸ್ಲಿಂ ಸಮಾಜದ ಮಾಜಿ ಅಧ್ಯಕ್ಷ ಕೆ.ಸಿ. ಖಾದರ್ ಭಾಷಾ ಸಾಬ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರಿಫ್ ಜಾನ್ ಸಾಬ್, ಮುಖಂಡರು ಮೊಹಮ್ಮದ್ ಇಲಿಯಾಜ್, ರೋಷನ್, ಆಸಿಫ್, ಅಕ್ರಂ, ಅಫೀದ್ ತನ್ನೂ, ಹಾಸನ ರಕ್ತ ನಿಧಿ ಕೇಂದ್ರದ ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಲವಾರು ಯುವಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯೂ ರಕ್ತದಾನದಲ್ಲಿ ಭಾಗವಹಿಸಿದ್ದರು.