ಉತ್ಪಾದಕರು ಕೇವಲ ಲಾಭ ಗಳಿಸುವ ಉದ್ದೇಶದಿಂದ ವಸ್ತು ಉತ್ಪಾದಿಸಿ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗ್ರಾಹಕರು ಸರಕು, ಸೇವೆ ಪಡೆಯುವಾಗ ಹಿಂದಿಗಿಂತಲೂ ಹೆಚ್ಚು ಜಾಗೃತರಾಗಬೇಕು.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ಪಾದಕರು ಕೇವಲ ಲಾಭ ಗಳಿಸುವ ಉದ್ದೇಶದಿಂದ ವಸ್ತು ಉತ್ಪಾದಿಸಿ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗ್ರಾಹಕರು ಸರಕು, ಸೇವೆ ಪಡೆಯುವಾಗ ಹಿಂದಿಗಿಂತಲೂ ಹೆಚ್ಚು ಜಾಗೃತರಾಗಬೇಕು. ಗ್ರಾಹಕರ ಹಕ್ಕುಗಳ ಮಹತ್ವ, ಕರ್ತವ್ಯ ತಿಳಿದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಇಲ್ಲಿನ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಕಾಲದಲ್ಲಿ ಯುವ ಜನತೆ ಮನೆಯಲ್ಲಿ ಕುಳಿತು ಆನ್‌ಲೈನ್ ಸೇವೆ ಪಡೆಯುವುದು ಹೆಚ್ಚಾಗಿದ್ದು, ಇದರಲ್ಲೇ ಹೆಚ್ಚಿನ ಮೋಸಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ವಸ್ತು ಖರೀಸುವಾಗ ಅದರ ಗುಣಮಟ್ಟ, ಬೆಲೆ ಕುರಿತು ಜಾಗೃತಿ ವಹಿಸಿ ಪರಿಶೀಲಿಸಿದ ನಂತರವೇ ಖರೀದಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಈಚಿನ ದಿನಗಳಲ್ಲಿ ಕೆಲ ವ್ಯಾಪಾರಸ್ಥರು ಗ್ರಾಹಕರ ಆರೋಗ್ಯದ ದೃಷ್ಟಿ ನೋಡದೇ ನಕಲಿ ವಸ್ತುಗಳನ್ನು ಸೃಷ್ಟಿಸಿ ಲಾಭಾಂಶಗಳಿಗಾಗಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಹಾಗೂ ಆಕರ್ಷಕ ಜಾಹಿರಾತು ನಂಬಿ, ವಸ್ತುಗಳನ್ನು ಖರೀದಿಸದೇ ಅದರ ಗುಣಮಟ್ಟ ಅರಿತುಕೊಂಡು ಖರೀದಿಸಬೇಕು. ಗ್ರಾಹಕರ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಅರಿವು ಇದ್ದಲ್ಲಿ ಗ್ರಾಹಕರಿಗೆ ಆಗುವ ಅನ್ಯಾಯ ತಡೆಯಬಹುದು ಎಂದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ, ಗ್ರಾಹಕರ ಹಿತ ಕಾಯುವದಕ್ಕಾಗಿಯೇ ಆಯೋಗವು ಕಾರ್ಯನಿರ್ವಹಿಸುತ್ತದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಲತಾ ಕೆ. ಗ್ರಾಹಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಸುಮನ್ ಗೋವಿಂದ ಸಾವಂತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗವತ್ ಇದ್ದರು.