ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ನಗರ ಘಟಕದಿಂದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ತರಬೇತಿ ಹಾಗೂ ಬ್ಯಾಂಕ್ ಮಾಹಿತಿ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಉದ್ಘಾಟಿಸಿದರು.

ಸ್ವ ಉದ್ಯೋಗ ತರಬೇತಿ ಹಾಗೂ ಬ್ಯಾಂಕ್ ಮಾಹಿತಿ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ನಗರ ಘಟಕದಿಂದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ತರಬೇತಿ ಹಾಗೂ ಬ್ಯಾಂಕ್ ಮಾಹಿತಿ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಂದು ಮಹಿಳೆಯರು, ಬ್ಯಾಂಕಿಂಗ್ ವ್ಯವಹಾರ ಸಹಿತ ಉತ್ತಮ ಜೀವನ ನಡೆಲು ಕಲಿತಿರುವುದು ಹೆಮ್ಮೆಯ ಸಂಗತಿ. ಹಿಂದೆಯೂ ಕೂಡಾ ಮಹಿಳೆಯರು ವ್ಯಾವಹಾರಿಕವಾಗಿ ಮುಂದೆ ಇದ್ದರೂ ಕೂಡಾ ಅದು ಮನೆ, ಸಂಸಾರಕ್ಕಷ್ಟೇ ಸೀಮಿತವಾಗಿತ್ತು. ಸ್ವ ಸಹಾಯ ಸಂಘದಿಂದಾಗಿ ಸಮಾಜ ಮುಖಿ ಕಾರ್ಯಕ್ಕೆ ಸಹಕಾರಿಯಾಗಿದೆ ಎಂದರು.

ಮಹಿಳೆಯರು ವಿಶೇಷವಾಗಿ ಬ್ಯಾಂಕಿಂಗ್‌ನಲ್ಲಿ ಬಹಳ ಜಾಗೃತೆ ವಹಿಸಬೇಕಾಗಿದೆ. ಸೈಬರ್ ವಂಚಕರು ನಾನಾ ರೀತಿಯಲ್ಲಿ ವಂಚನೆಗೆ ಮುಂದಾಗುತ್ತಿದ್ದು ಜಾಗೃತರಾಗಿ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಆರ್ಥಿಕ ಸಾಕ್ಷರತಾ ಅಧಿಕಾರಿ ಗೀತಾ ನಾಯ್ಕ, ಸರಕಾರಿ ಸೌಲಭ್ಯದ ಕುರಿತು, ಬ್ಯಾಂಕ್ ಖಾತೆಗಳಲ್ಲಿ ಇರುವ ಎರಡು ವಿಮಾ ಯೋಜನೆಯ ಪ್ರಯೋಜನಗಳು, ಜನಧನ್ ಯೋಜನೆಯ ಪ್ರಯೋಜನಗಳು, ಬ್ಯಾಂಕಿನಲ್ಲಿ ಸಿಬಿಲ್ ಸ್ಕೋರ್ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ಪ್ರವೀಣ್ ಕುಮಾರ್, ಸಾಲಸೌಲಭ್ಯ, ಸಿಬಿಲ್‌ ಬಡ್ಡಿ ಬಗ್ಗೆ ಮಾಹಿತಿ ನೀಡಿದರು.

ತಾಲೂಕಿನ ಯೋಜನಾಧಿಕಾರಿ ಲತಾ ಬಂಗೇರ ಯೋಜನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಆಯ್ದ ಫಲಾನುಭವಿಗಳು ಭಾಗವಹಿಸಿದ್ದರು. ಸರ್ಪನಕಟ್ಟೆ ಮೇಲ್ವಿಚಾರಕ ಪ್ರಭಾಕರ ನಿರೂಪಿಸಿದರು. ಭಟ್ಕಳ ಮೇಲ್ವಿಚಾರಕ ರಮೇಶ ಸ್ವಾಗತಿಸಿದರು.