ಕನ್ನಡಪ್ರಭ ವಾರ್ತೆ ಮಂಡ್ಯ
ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೋಡ್ಸ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಶ್ರಯದಲ್ಲಿ ನಡೆದ ಸ್ವಯಂಪ್ರೇರಿತ ಬೃಹತ್ ರಕ್ತದಾನ ಅಭಿಯಾನದಲ್ಲಿ 183 ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ದಾನಿಗಳು ನೀಡಿದ ರಕ್ತವನ್ನು ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿಕೊಂಡರು. ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಶಿಬಿರಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಅಗತ್ಯಯುಳ್ಳವರಿಗೆ ಒಂದು ಎರಡು ರಕ್ತದ ಗುಂಪು ಲಭ್ಯವಾಗುತ್ತಿಲ್ಲ. ಇಂತಹ ರಕ್ತದಾನ ಅಭಿಯಾನದಿಂದ ಪೂರೈಕೆಗೆ ನೆರವಾಗುತ್ತಿದೆ. ರಕ್ತದಾನಿಗಳು ನೀಡುವ ರಕ್ತದಿಂದ 3 ರಿಂದ 4 ಮಂದಿ ಮಂದಿ ಜೀವ ಉಳಿಸಿದ ಪುಣ್ಯ ರಕ್ತದಾನಿಗಳಿಗೆ ಸಲ್ಲುತ್ತದೆ ಎಂದರು.ಪಿಇಎಸ್ ಶಿಕ್ಷಣ ಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗ ನೀಡಿದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರನ್ನು ಮರೆಯಲು ಸಾಧ್ಯವಿಲ್ಲ. ರಂಗಭೂಮಿ ಮೂಲಕ ನಾಟಕಗಳನ್ನು ಆಡಿ ಬಂದ ಹಣದಲ್ಲಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ. ಇಂತಹ ಮಹಾ ಪುರುಷರನ್ನು ಸ್ಮರಿಸೋಣ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಡಾ. ಮೀರಾಶಿವಲಿಂಗಯ್ಯ ಮಾತನಾಡಿ, ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಸಾಧನೆಗಳು ಮತ್ತು ಕೊಡುಗೆಗಳು ಇನ್ನೂ ಜೀವಂತ. ಅವರನ್ನು ಸ್ಮರಿಸಿಕೊಳ್ಳದ ದಿನಗಳೇ ಇಲ್ಲ. ನಾಡಿನುದ್ದಗಲಕ್ಕೂ ಸದಾ ಪ್ರಾತ:ಸ್ಮರಣೀಯರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಮಂಜುನಾಥ, ಉಪಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್, ಯುವ ರೆಡ್ ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ಪ್ರೊ.ಜಯರಾಂ, ಪ್ರೊ.ಮರಿಯಯ್ಯ, ಡಾ.ಶಿವಕುಮಾರ್, ಡಾ.ರಮೇಶ್, ಪ್ರೋ.ಜೋಗಿಗೌಡ, ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಷಡಕ್ಷರಿ, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗಿಶ್, ರಕ್ತನಿಧಿಕೇಂದ್ರದ ರಫಿ, ರಾಜು, ರಾಮು, ಜಗದೀಶ್ ಹಾಜರಿದ್ದರು.