ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ 10ರಂದು ವಿಧಾನಸೌಧ ಚಲೋ

KannadaprabhaNewsNetwork | Published : Mar 6, 2025 12:31 AM

ಸಾರಾಂಶ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂಬುದು ಸೇರಿದಂತೆ ರೈತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್‌) ವತಿಯಿಂದ ಮಾ. 10ರಂದು ವಿಧಾನಸೌಧ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂಬುದು ಸೇರಿದಂತೆ ರೈತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್‌) ವತಿಯಿಂದ ಮಾ. 10ರಂದು ವಿಧಾನಸೌಧ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋವಿಂದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಅನೇಕ ವರ್ಷಗಳಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಧೋರಣೆ ಖಂಡಿಸಿ, ಕೂಡಲೇ ದುಡಿಯುವ ಜನರ ಹಿತ ಕಾಯಬೇಕು ಎಂದು ಒತ್ತಾಯಿಸಿ ವಿಧಾನಸೌಧ ಚಲೋ ಹೋರಾಟವನ್ನು ಸಂಘಟಿಸಲಾಗಿದೆ. ಇದಲ್ಲದೆ ರೈತರ ಇತರೆ ಬೇಡಿಕೆಗಳಾದ ಮನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಒಂದು ಕುಟುಂಬಕ್ಕೆ ಕನಿಷ್ಠ 200 ಮಾನವ ದಿನಗಳ ಕೆಲಸ ಮತ್ತು ₹600 ಕೂಲಿ ನೀಡಬೇಕು. ಹೊಸ ಕೃಷಿ ಮಾರುಕಟ್ಟೆ ನೀತಿ ಕೈಬಿಡಬೇಕು. ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರವೇ ರೈತರ ಬೆಳೆಗಳನ್ನು ಖರೀದಿಸಬೇಕು. ವಿದ್ಯುತ್ ಕಾಯ್ದೆ 2023ರನ್ನು ರದ್ದುಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳಿವೆ ಎಂದರು.

ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿಯನ್ನು ಸಂಪೂರ್ಣ ಮರೆತಿವೆ. ಸಮಸ್ಯೆಗಳ ಪರಿಹಾರಕ್ಕಾಗಿ ಇರುವ ಏಕೈಕ ದಾರಿ ಎಂದರೆ ಅದು ಒಗ್ಗಟ್ಟಿನ ಹೋರಾಟವಾಗಿದೆ. ವಿಧಾನಸೌಧ ಚಲೋ ಹೋರಾಟಕ್ಕೆ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೈತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಸಮಿತಿ ಸದಸ್ಯ ಈ. ಹನುಮಂತಪ್ಪ, ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

Share this article