ದೇಶದಾದ್ಯಂತ ಅ.1ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ ಎಂದು ಆಚರಿಸಲಾಗುತ್ತಿದೆ. ಸುರಕ್ಷಿತ ರಕ್ತದಾನದ ಬಗೆಗಿನ ಆದ್ಯತೆ ಮತ್ತು ಅಗತ್ಯತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಜನರಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ದಿನಾಂಕ 1 ಅ.1975ರಂದು ಭಾರತೀಯ ರಕ್ತಪೂರಣ ಸಂಸ್ಥೆಯ ಅಡಿಯಲ್ಲಿ ಆಡಿ. Dr. J.G. Jolly ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಆರಂಭಿಸಲಾಯಿತು. ರಕ್ತದಾನದ ಬಗೆಗಿನ ಅನಗತ್ಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಪ್ರತಿ ಆರೋಗ್ಯವಂತ ವ್ಯಕ್ತಿ ಕಾಲಕಾಲಕ್ಕೆ ರಕ್ತದಾನ ಮಾಡಲು ಪ್ರಚೋದಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಲಾಗುತ್ತದೆ. ರಕ್ತ ನಮ್ಮ ದೇಹದ ಅತೀ ಅಮೂಲ್ಯವಾದ ದ್ರವ್ಯ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸುಮಾರು 5ರಿಂದ 6 ಲೀಟರ್‍ಗಳಷ್ಟು ರಕ್ತವಿರುತ್ತದೆ. ರಕ್ತ ನಮ್ಮ ದೇಹದ ತೂಕದ 7 ಪ್ರತಿಶತ ತೂಗುತ್ತದೆ. ರಕ್ತದಲ್ಲಿ ಬಿಳಿರಕ್ತಕಣ, ಕೆಂಪುರಕ್ತಕಣ, ಪ್ಲೇಟ್‍ಲೆಟ್ ಮತ್ತು ಪ್ಲಾಸ್ಮಾ ಮುಂತಾದ ಬೇರೆ ಬೇರೆ ರೀತಿಯ ಅಂಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. ಒಟ್ಟು ರಕ್ತದಾನ ಮಾಡುವಾಗ 350 ಮಿ. ಲೀ. ರಕ್ತವನ್ನು ತೆಗೆಯಲಾಗುತ್ತದೆ.
ರಕ್ತದ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಯಾಕೆಂದರೆ ಅನಿರೀಕ್ಷಿತ ಅಪಘಾತಗಳು, ತುರ್ತು ಚಿಕಿತ್ಸೆಗಳ ಸಮಯದಲ್ಲಿ, ರಕ್ತದ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ಸಮಯದಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇದಲ್ಲದೆ ಥಾಲಸೀಮೀಯಾ (ಅನುವಂಶಿಕ ರೋಗ) ಮತ್ತು ಹಿಮೊಫಿಲಿಯಾ (ಕುಸುಮರೋಗ) ಇರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತದಾನದ ಅವಶ್ಯಕತೆ ಇರುತ್ತದೆ.ಪ್ರತೀ ವರ್ಷ ನಮ್ಮ ದೇಶದಲ್ಲಿ ಸುಮಾರು 1 ರಿಂದ 1.5 ಕೋಟಿ ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇದೆ. (ದೇಶದ ಜನಸಂಖ್ಯೆಯ ಒಂದು ಶೇಕಡಾ) ಆದರೆ ಬಹಳ ನೋವಿನ ಸಂಗತಿಯೆಂದರೆ ಪ್ರತೀ ವರ್ಷ ಸ್ವಯಂಪ್ರೇರಿತ ರಕ್ತದಾನಿಗಳಿಂದ ಶೇಖರಿಸಲ್ಪಡುವ ರಕ್ತದ ಯೂನಿಟ್ ಕೇವಲ 90 ರಿಂದ 95ಲಕ್ಷ ಯೂನಿಟ್‍ಗಳು ಮಾತ್ರ. ಅಂದರೆ ಬೇಡಿಕೆಯ ಶೇಕಡಾ 70ರಿಂದ 80ರಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿಯೆ ಪ್ರತಿದಿನ 900ರಿಂದ 1200ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಸರಿಸುಮಾರು 3000 ರಕ್ತದ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿದೆ.
ರಕ್ತದಾನ ಯಾರು ಮಾಡಬಹುದು
ರಕ್ತವನ್ನು ದಾನಿಗಳ ದೇಹದಿಂದ ತೆಗೆಯಲು ಸಂಸ್ಕರಿಸಿದ ಉಪಕರಣಗಳನ್ನು ಉಪಯೋಗಿಸಿ ನುರಿತ ವೈದ್ಯರು ನೋವಿಲ್ಲದೆ ಸಂಗ್ರಹಿಸುತ್ತಾರೆ. ರಕ್ತದಾನಿಗಳಿಂದ ಪಡೆದ ರಕ್ತವನ್ನು ವಿಶೇಷವಾದ ಹೆಪ್ಪು ನಿರೋಧಕ ದ್ರವ್ಯಗಳಿರುವ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ದಾನಿಗಳಿಂದ ಪಡೆದ ರಕ್ತವನ್ನು ರಕ್ತದ ಮೂಲಕ ಹರಡಬಹುದಾದ ಹೆಪಟೈಟಿಸ್ ಬಿ ಮತ್ತು ಸಿ, ಎಚ್.ಐ.ವಿ, ಮಲೇರಿಯಾ, ಸಿಫಿಲಿಸ್ ರೋಗಾಣುಗಳಿಗಾಗಿ ಪರೀಕ್ಷಿಸಲಾಗುತ್ತದೆ. ಹೀಗೆ ದಾನಿಗಳಿಂದ ಪಡೆದ ರಕ್ತವನ್ನು ಯಾವುದೇ ರೋಗಾಣುಗಳಿಲ್ಲವೆಂದು ಖಾತರಿಗೊಳಿಸಿದ ಬಳಿಕವೇ ಬೇರೆ ರೋಗಿಗಳಿಗೆ ರಕ್ತದಾನ ಮಾಡಲು ಉಪಯೋಗಿಸುತ್ತಾರೆ.
ದಾನಿಗಳಿಂದ ಪಡೆದ ರಕ್ತವನ್ನು ರೋಗಾಣು ಮಕ್ತ ಎಂದು ಖಾತರಿಗೊಳಿಸಿದ ಬಳಿಕ ಶೀತಲೀಕರಣ (ರೆಫ್ರಿಜರೇಟ್) ಯಂತ್ರಗಳಲ್ಲಿ ಸೂಕ್ತ ಉಷ್ಣತೆಯಲ್ಲಿ ಶೇಖರಿಸಿಡಲಾಗುತ್ತದೆ. ಸಾಮಾನ್ಯವಾಗಿ ಪೂರ್ತಿ ರಕ್ತವನ್ನು (ಹೋಲ್‍ಬ್ಲಡ್) ಮತ್ತು ಇದನ್ನು ಸುಮಾರು 32 ರಿಂದ 42 ದಿನಗಳವರೆಗೆ ನೀಡಬಹುದು ಮತ್ತು ಈ ಅವಧಿಯ ಒಳಗೆ ಬೇರೆಯವರಿಗೆ ನೀಡಬಹುದು. ಅವಧಿ ಕಳೆದ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಕೆಲವೊಮ್ಮೆ ರಕ್ತದಿಂದ ಪ್ಲಾಸ್ಮಾ ಎಂಬ ಅಂಶವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿ ಪ್ಲಾಸ್ಮಾವನ್ನು -40ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಒಂದು ವರ್ಷದವರೆಗೆ ಶೇಖರಿಸಿಡಬಹುದು. -80 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ 5 ವರ್ಷದಿಂದ 7 ವರ್ಷಗಳ ಕಾಲ ಶೇಖರಿಸಿಡಬಹುದು. ಕೆಲವೊಮ್ಮೆ ಕ್ರಯೋಪ್ರೆಸಿಪಿಟೇಟ್ ಎಂಬ ರಕ್ತವನ್ನು ವಿಂಗಡಿಸಿ -40 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಒಂದು ವರ್ಷದವರೆಗೆ ಶೇಖರಿಸಿಡಲಾಗುತ್ತದೆ. ಈ ಔಷಧಿಯನ್ನು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟದೇ ಇರುವ ರೋಗಗಳಾದ ಕುಸುಮರೋಗ (ಹಿಮೋಫಿಲಿಯಾ) ಮತ್ತು ರಕ್ತನಾಳದ ಒಳಗೆ ಸ್ವಯಂಪ್ರೇರಿತವಾಗಿ ವಿನಾಕಾರಣ ರಕ್ತಹೆಪ್ಪುಗಟ್ಟುವ ರೋಗ (ಡಿ.ಐ.ಸಿ)ದ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ. ಕೆಲವೊಮ್ಮೆ ರಕ್ತದಲ್ಲಿನ ಪ್ಲೇಟ್‍ಲೆಟ್ ಎಂಬ ಅಂಶವನ್ನು ರಕ್ತದಿಂದ ಬೇರ್ಪಡಿಸಿ 22 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಸುಮಾರು 5 ದಿನಗಳವರೆಗೆ ಶೇಖರಿಸಲಾಗುತ್ತದೆ. ಈ ರೀತಿಯ ರಕ್ತಕಣಗಳನ್ನು ಡೆಂಗು, ಚಿಕುನ್‍ಗುನ್ಯಾ ಮುಂತಾದ ರೋಗಿಗಳಿಗೆ ಮತ್ತು ರಕ್ತ ಹೆಪ್ಪು ಗಟ್ಟದಿರುವ ರೋಗಿಗಳ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಆದರೆ ಇಂತಹ ರಕ್ತ ಕಣಗಳನ್ನು 5 ದಿನಗಳಿಗಿಂತ ಹೆಚ್ಚು ಉಪಯೋಗಿಸಲು ಸಾಧ್ಯವಾಗುವುದಿಲ್ಲ.ವಿಪರ್ಯಾಸವೆಂದರೆ ವಿದ್ಯಾವಂತ ಜನರು ಕೂಡಾ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಕ್ತದಾನದ ಬಗ್ಗೆ ಸೂಕ್ತವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿ ಸಾರ್ವಜನಿಕ ಮನದಾಳದಲ್ಲಿ ಬೇರೂರಿರುವ ಸತ್ಯಕ್ಕೆ ದೂರವಾದ ವಿಚಾರಗಳನ್ನು ತಪ್ಪು ಕಲ್ಪನೆಗಳನ್ನು ಹೊಡೆದೋಡಿಸುವ ಕಾರ್ಯ ನಡೆಯಬೇಕು. -ಡಾ.ಮುರಲೀ ಮೋಹನ್ ಚೂಂತಾರು, ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ.