ಕನ್ನಡಪ್ರಭ ವಾರ್ತೆ ಮಂಡ್ಯ
ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತ, ಪರ್ಯಾಯ ಔಷಧ ಇಲ್ಲದಿರುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ಸಲಹೆ ನೀಡಿದರು.ತಾಲೂಕಿನ ಸಿದ್ದಯ್ಯನಕೊಪ್ಪಲು ಬಳಿ ಇರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾವೇರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಪ್ರಸ್ತುತ ಬೇಡಿಕೆ ಇರುವಷ್ಟು ರಕ್ತ ಸಿಗುತ್ತಿಲ್ಲ. ಇದರಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಎಷ್ಟೋ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಕ್ತದಾನಕ್ಕೆ ಮುಖ್ಯವಾಗಿ ಯುವಸಮೂಹ ಮುಂದಾಗಬೇಕು. ಯುವಕರು ರಕ್ತದಾನ ಮಾಡುವುದರೊಂದಿಗೆ ಇತರರನ್ನು ಪ್ರೇರೇಪಿಸಬೇಕು. ರಕ್ತದಾನದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ ದಾನವಾಗಿದೆ. ರಕ್ತವನ್ನು ಔಷಧಿ ಎಂದು ಪರಿಗಣಿಸಲಾಗುತ್ತಿದೆ. ರಕ್ತದಾನ ಶಿಬಿರವು ಮಾನವೀಯ ಮೌಲ್ಯವನ್ನು ಬಿತ್ತುವುದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕತೆ ತಕ್ಕಂತೆ ರಕ್ತ ಸಿಗುತ್ತಿಲ್ಲ, ಆದ್ದರಿಂದ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಬೇಕು ಎಂದು ಹೇಳಿದರು.
ರಕ್ತದಾನದಿಂದ ಭ್ರಾತೃತ್ವ ಭಾವನೆ ಬೆಳೆಯುತ್ತದೆ, ಇದರಿಂದ ಸಂಬಂಧಗಳು ಬೆಳೆಯುತ್ತವೆ. ಜಾತಿ, ಧರ್ಮಗಳನ್ನು ಮೀರಿದ್ದು ರಕ್ತದಾನವಾಗಲಿದೆ. ಒಂದು ಯುನಿಟ್ ರಕ್ತದಿಂದ ಮೂರ್‍ನಾಲ್ಕು ಜನರಿಗೆ ಅನುಕೂಲವಾಗಲಿದೆ ಎಂದರು.ಅಲಯನ್ಸ್ ಕ್ಲಬ್ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ, ದೇಶದಲ್ಲಿ 143 ಕೋಟಿ ಜನಸಂಖ್ಯೆ ಇದೆ, ದೇಶದಲ್ಲಿ ಪ್ರತಿನಿತ್ಯ 38 ಸಾವಿರ ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ, ನಮಗೆ ಸಿಗುತ್ತಿರುವ ರಕ್ತದ ಪ್ರಮಾಣ 20 ರಿಂದ 22 ಸಾವಿರ ಯುನಿಟ್ ಗಳು ಮಾತ್ರ. ಆದ್ದರಿಂದ ಇನ್ನು ಹೆಚ್ಚಿನ ರಕ್ತದಾನದ ಅವಶ್ಯಕತೆ ಇದೆ. ಎಷ್ಟೋ ಜನ ಸರಿಯಾದ ಕಾಲಕ್ಕೆ ರಕ್ತ ಸಿಗದೇ ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ರಕ್ತದಾನಿಗಳ ಸಂಖ್ಯೆ ಹೆಚ್ಚಳವಾಗಬೇಕಿದೆ ಎಂದರು.
ಕಾಲೇಜಿನ ಅಧ್ಯಕ್ಷ ಡಾ. ಎಚ್.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಎ.ಎಸ್. ಶ್ರೀಕಂಠಪ್ಪ, ಉಪಪ್ರಾಂಶುಪಾಲ ಪ್ರೊ. ಮಂಜುನಾಥ್, ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಡಾ. ಆರತಿ, ಡಾ.ಎ.ಪಿ.ಸವಿತಾ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಸೇರಿದಂತೆ ಸಿಬ್ಬಂದಿ ವರ್ಗದವರೆಲ್ಲರೂ ಸಹ ಹಾಜರಿದ್ದರು.