ಉಡುಪಿ ಜಿಲ್ಲೆಯ 2 ದಶಕಗಳ ರಕ್ತ ಚರಿತ್ರೆ: 6 ನಕ್ಸಲೀಯರು, 4 ನಾಗರಿಕರು ಬಲಿ

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಮಲೆನಾಡಿನಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ನಕ್ಸಲೀಯರ 2 ದಶಕಗಳ ರಕ್ತಸಿಕ್ತ ಚರಿತ್ರೆಯೇ ಇದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರದ ಎನ್‌ಕೌಂಟರ್‌ ಸೇರಿ ಒಟ್ಟು 4 ಎನ್‌ಕೌಂಟರ್‌ಗಳಲ್ಲಿ 6 ಮಂದಿ ನಕ್ಸಲೀಯರನ್ನು ಪೊಲೀಸರು ಕೊಂದು ಹಾಕಿದ್ದಾರೆ. ಪ್ರತಿಯಾಗಿ ನಕ್ಸಲೀಯರು 4 ಮಂದಿ ನಾಗರಿಕನ್ನು ಹತ್ಯೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ನಾಲ್ಕು ಎನ್‌ಕೌಂಟರ್‌ । ನಕ್ಸಲರಿಂದಲೂ ಪ್ರತಿಕಾರ

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಡುಪಿ

ಮಲೆನಾಡಿನಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ನಕ್ಸಲೀಯರ 2 ದಶಕಗಳ ರಕ್ತಸಿಕ್ತ ಚರಿತ್ರೆಯೇ ಇದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರದ ಎನ್‌ಕೌಂಟರ್‌ ಸೇರಿ ಒಟ್ಟು 4 ಎನ್‌ಕೌಂಟರ್‌ಗಳಲ್ಲಿ 6 ಮಂದಿ ನಕ್ಸಲೀಯರನ್ನು ಪೊಲೀಸರು ಕೊಂದು ಹಾಕಿದ್ದಾರೆ. ಪ್ರತಿಯಾಗಿ ನಕ್ಸಲೀಯರು 4 ಮಂದಿ ನಾಗರಿಕನ್ನು ಹತ್ಯೆ ಮಾಡಿದ್ದಾರೆ.

* ಜಿಲ್ಲೆಯ ಮೊದಲ ನಕ್ಸಲ್‌ ಎನ್‌ಕೌಂಟರ್ 2003ರ ನ.17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದ ಬಲ್ಯೊಟ್ಟು ಎಂಬಲ್ಲಿ ನಡೆದಿತ್ತು, ಇದರಲ್ಲಿ ಹಾಜೀಮಾ ಮತ್ತು ಪಾರ್ವತಿ ಎಂಬ ಇಬ್ಬರು ಮಹಿಳಾ ನಕ್ಸಲೀಯರನ್ನು ಕೊಂದಿದ್ದ ಪೊಲೀಸರು, ಯಶೋದಾ ಕಳಸ ಎಂಬಾಕೆಯನ್ನು ಗಾಯಗೊಳಿಸಿ ಬಂಧಿಸಿದ್ದರು. ಇತರ ಮೂವರು ನಕ್ಸಲೀಯರು ತಪ್ಪಿಸಿಕೊಂಡಿದ್ದರು.

* 2005ರ ಜೂ.23ರಂದು ಕುಂದಾಪುರದ ದೇವರಬಾಳು ಎಂಬಲ್ಲಿನ ದಟ್ಟ ಕಾಡಿನ ನಡುವೆ ಒಂಟಿ ಮನೆಯೊಂದಕ್ಕೆ ಆಹಾರಕ್ಕಾಗಿ ಬಂದಿದ್ದ ನಕ್ಸಲೀಯರ ಮೇಲೆ ಮುಗಿಬಿದ್ದ ಪೊಲೀಸರು ಅಜಿತ್ ಕುಸುಬಿ ಮತ್ತು ಉಮೇಶ್ ಅವರನ್ನು ಕೆಡವಿ ಹಾಕಿದ್ದರು.

* 2010ರ ಮಾ.1ರಂದು ಮತ್ತೆ ಕಾರ್ಕಳದ ಮುಟ್ಲುಪಾಡಿ ಎಂಬಲ್ಲಿ ಕಾಡಿನ ಮಧ್ಯೆ ಹೊಂಚು ಹಾಕಿ ಕುಳಿತಿದ್ದ ನಕ್ಸಲ್ ನಿಗ್ರಹ ಪಡೆಗೆ ಆನಂದ ಯಾನೆ ವಸಂತ ಕುತ್ಲೂರು ಬಲಿಯಾಗಿದ್ದ.ನಕ್ಸಲರಿಂದ ಪ್ರತಿಕಾರ

ಜಿಲ್ಲೆಯಲ್ಲಿ ಪೊಲೀಸರು ಮಾತ್ರವಲ್ಲ ನಕ್ಸಲೀಯರು ಸಾಕಷ್ಟು ರಕ್ತಪಾತವನ್ನು ನಡೆಸಿದ್ದಾರೆ.

* 2008ರ ಮೇ 15ರಂದು ಹೆಬ್ರಿ ತಾಲೂಕಿನ ಸೀತಾನದಿ ಬಳಿ ಪೊಲೀಸ್ ಮಾಹಿತಿದಾರ ಶಿಕ್ಷಕ ಭೋಜೇಗೌಡ ಮತ್ತವರ ಅಳಿಯ ಸುರೇಶ್ ಎಂಬವರನ್ನು ಮನೆಯಂಗಳದಲ್ಲಿಯೇ ನಕ್ಸಲರು ಹೊಡೆದುರುಳಿಸಿದ್ದರು.

* ಅದೇ ವರ್ಷ ಜು.28ರಂದು ನಕ್ಸಲರು ಕಾರ್ಕಳ ತಾಲೂಕಿನ ಮತ್ತಾವು ಎಂಬಲ್ಲಿ ನೆಲಬಾಂಬ್ ಸ್ಪೋಟಿಸಿ ಪೊಲೀಸರ ಜೀಪನ್ನು ಅಡಿಮೇಲು ಮಾಡಿದ್ದರು, ಇದರಲ್ಲಿ 7 ಮಂದಿ ಪೊಲೀಸರು ಗಾಯಗೊಂಡಿದ್ದರು.

* ನಂತರ ಡಿ.7ರಂದು ಪೊಲೀಸರಿಗೆ ತಮ್ಮ ಬಗ್ಗೆ ಮಾಹಿತಿ ನೀಡುತಿದ್ದ ಎಂಬ ಕಾರಣಕ್ಕೆ ಕುಂದಾಪುರದ ಹಳ್ಳಿಹೊಳೆಯ ಕೃಷಿಕ ಕೇಶವ ಯಡಿಯಾಳ್ ಎಂಬವರನ್ನೂ ಗುಂಡಿಕ್ಕಿ ಕೊಂದಿದ್ದರು.

* 2011ರ ಡಿ. 25ರಂದು ಹೆಬ್ರಿ ಸಮೀಪದ ತಿಂಗಳಮಕ್ಕಿಯ ಸದಾಶಿವ ಗೌಡ ಎಂಬ ಪೊಲೀಸ್ ಮಾಹಿತಿದಾರನನ್ನು ಅಪಹರಿಸಿದ ನಕ್ಸಲರು ಕಾಡಿನ ಮಧ್ಯೆ ಮರಕ್ಕೆ ಕಟ್ಟಿ ಹಾಕಿ ಸಾಯುವಂತೆ ಮಾಡಿದ್ದರು.

Share this article