ಸಿಎಂ ವಿರುದ್ಧ ತನಿಖೆಗೆ ಅವಕಾಶ ಕೊಟ್ರೆ ರಕ್ತಪಾತ

KannadaprabhaNewsNetwork | Published : Aug 6, 2024 12:38 AM

ಸಾರಾಂಶ

ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಅವರನ್ನುಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಪಿತೂರೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಚಿತ್ರದುರ್ಗದಲ್ಲಿ ನಡೆದ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸುವ ಸಂಬಂಧ ರಾಜ್ಯಪಾಲರು ಒಂದು ವೇಳೆ ಅನುಮತಿ ನೀಡಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟಗಳು ನಡೆದು ರಕ್ತಪಾತಗಳಾಗುತ್ತವೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಸೋಮವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದ ಒಕ್ಕೂಟಗಳು ಸಿದ್ದರಾಮಯ್ಯ ಪರ ನಾವಿದ್ದೇವೆ. ರಾಜ್ಯಪಾಲರು ರಾಜಕೀಯ ಪ್ರೇರಿತ ನಿರ್ಧಾನ ಕೈಗೊಂಡರೆ ಅದರ ಪರಿಣಾಮಗಳ ಎದುರಿಸಬೇಕಾಗುತ್ತದೆ. ಗೋಬ್ಯಾಕ್ ರಾಜ್ಯಪಾಲ ಚಳವಳಿ ಆರಂಭಿಸುವುದಾಗಿ ಹೇಳಿದವು.

ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಗಾಂಧಿ ವೃತ್ತ, ಎಸ್‌ಬಿಎಂ ಸರ್ಕಲ್, ಪ್ರವಾಸಿ ಮಂದಿರ ಮೂಲಕ ಒನಕೆ ಓಬವ್ವ ವೃತ್ತ ತಲುಪಿತು.

ಈ ವೇಳೆ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ ಅವರು, ಬಿಜೆಪಿ-ಜೆಡಿಎಸ್ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ನಡೆಸಿದ ಅವ್ಯವಹಾರ, ಭ್ರಷ್ಠಾಚಾರ, ಸ್ವಜನಪಕ್ಷಪಾತ ಮರೆತು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ನಿವೇಶನ ಹಗರಣದಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ. ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಪ್ರಜಾಪ್ರಭುತ್ವಕ್ಕೆ ಅಪಚಾರವೆಸಗಿ ವಾಮ ಮಾರ್ಗದಿಂದ ಅಧಿಕಾರ ಹಿಡಿದಿದ್ದ ವಿರೋಧಿಗಳು ವಿನಾ ಕಾರಣ ತೇಜೋವಧೆ ಮಾಡಲು ಹೊರಟಿದ್ದಾರೆ. ಸಂವಿಧಾನದ ಪ್ರತಿನಿಧಿಯಾಗಿರಬೇಕಾದ ರಾಜ್ಯಪಾಲರು ಬಿಜೆಪಿ, ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆಂದು ಟೀಕಿಸಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ಬಡವರ ಪರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ನಡೆಸುತ್ತಿದೆ. ಯಾವುದೆ ಕಳಂಕವಿಲ್ಲದೆ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ವಿರುದ್ಧ ಪಿತೂರಿ ನಡೆಸುತ್ತಿರುವ ವಿರೋಧಿಗಳು ರಾಜ್ಯಪಾಲರ ಮೂಲಕ ನೋಟಿಸ್ ಕೊಡಿಸಿರುವುದರಲ್ಲಿ ಅರ್ಥವಿಲ್ಲ. ರಾಜ್ಯಪಾಲರ ವಿರುದ್ಧ ಗೋಬ್ಯಾಕ್ ಚಳುವಳಿ ನಡೆಸುವುದಾಗಿ ಎಚ್ಚರಿಸಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ಮಾತನಾಡಿ, ಪ್ರಧಾನಿ ಮೋದಿ ಮತ್ತು ಅಮಿತ್‍ ಶಾ ಇಬ್ಬರೂ ಸೇರಿ ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ನೋಟಿಸ್ ಜಾರಿ ಮಾಡಿಸಿ ಕಳೆದ ಹದಿನೈದು ದಿನಗಳಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮುಡಾ ನಿವೇಶನವನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಭ್ರಷ್ಟಾಚಾರವಾಗಿದ್ದರೆ ಅದಕ್ಕೆ ಬಿಜೆಪಿಯೇ ಹೊಣೆ. ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಹೊರೆಸಿದಂತಿದೆ. ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಶೋಷಿತ ಸಮುದಾಯಗಳು ಒಂದಾಗಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆಂದು ಹೇಳಿದರು.ಇದೇ ವೇಳೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಮಂಜಪ್ಪ, ಎಚ್.ಸಿ.ನಿರಂಜನಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಉಪಾಧ್ಯಕ್ಷರಾದ ಎಸ್.ಎನ್.ರವಿಕುಮಾರ್, ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಖುದ್ದೂಸ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತನಂದಿನಿ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲ ಸುರೇಶ್‍ಬಾಬು, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೊಹಿದ್ದೀನ್, ಸೇವಾದಳದ ಇಂದಿರಾ, ಪವಿತ್ರ, ಸುಧ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶ್ರಯ ಕಮಿಟಿ ಸದಸ್ಯೆ ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕಶಿವು, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ನಗರಸಭೆ ಮಾಜಿ ಸದಸ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ಮುದಸಿರ್ ನವಾಜ್, ಅಬ್ದುಲ್ಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ವಕೀಲ ಬೀಸ್ನಳ್ಳಿ ಜಯಣ್ಣ, ಸಿ.ಶಿವುಯಾದವ್, ಸುದರ್ಶನ್, ರವೀಂದ್ರ, ಮಹಮದ್ ರಫಿ, ದಲಿತ ಮುಖಂಡ ಬಿ.ರಾಜಪ್ಪ, ಮರುಳಾರಾಧ್ಯ, ಎ.ಸಾಧಿಕ್‍ವುಲ್ಲಾ, ಟಿ.ಸ್ವಾಮಿ ಭಾಗವಹಸಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಪಾಲರ ಪ್ರತಿಕೃತಿ ದಹನ ಮಾಡಲಾಯಿತು.

Share this article