ಕಂಪ್ಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಹಾಗೂ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ-2) ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಚುನಾವಣಾ ಆಯೋಗದ ನಿರ್ದೇಶನದಂತೆ ಸಂವಿಧಾನಬದ್ಧ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿದೆ. ಯಾವುದೇ ಅರ್ಹ ಮತದಾರ ಮತದಾನ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬಿಎಲ್‌ಎ-2ಗಳು ಬಿಎಲ್‌ಒಗಳೊಂದಿಗೆ ಸಕ್ರಿಯವಾಗಿ ಕೈಜೋಡಿಸಿ ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಚುನಾವಣಾ ನೋಂದಣಾಧಿಕಾರಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ.ಆರ್. ದೇವರಾಜ್ ಮಾತನಾಡಿ, ಮತದಾರರ ಪಟ್ಟಿಯು ನಿಖರ ಮತ್ತು ದೋಷರಹಿತವಾಗಿರಲು ಬಿಎಲ್‌ಒ ಹಾಗೂ ಬಿಎಲ್‌ಎ-2ಗಳ ಪಾತ್ರ ಮಹತ್ವದ್ದಾಗಿದೆ. ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಹಾಗೂ ಹೆಸರು ಕೈಬಿಡುವ ಪ್ರಕ್ರಿಯೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಹೇಳಿದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ನಾಗರಿಕರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ. ರಮೇಶ್, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ ಸೇರಿದಂತೆ ತಾಲೂಕಿನ ವಿವಿಧ ಮತಗಟ್ಟೆಗಳ ಬಿಎಲ್‌ಒಗಳು ಹಾಗೂ ರಾಷ್ಟ್ರೀಯ ಪಕ್ಷಗಳ ಬಿಎಲ್‌ಎ-2ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.