ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದೊಂದಿಗೆ ಭಟ್ಕಳ ನ್ಯಾಯಾಲಯಗಳ ಸಂಕೀರ್ಣದಲ್ಲಿ ಜು. ೧೧ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ರೂಪಶ್ರೀ ಶೆಟ್ಟಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಜು. ೧೧ರಂದು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಒಟ್ಟೂ ೧೦೦೦ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದರು.
ಲೋಕ ಅದಾಲತ್‌ನಲ್ಲಿ ರಾಜೀಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಪಾಲು ದಾವೆ ಸೇರಿದಂತೆ ಸಿವಿಲ್ ಪ್ರಕರಣಗಳು, ಜನನ ಮತ್ತು ಮರಣ ಕಾಯಿದೆಯ ಪ್ರಕರಣಗಳು, ವಿದ್ಯುತ್ ಬಿಲ್, ನೀರಿನ ಬಿಲ್ ಪ್ರಕರಣ, ವಾರಿಸಾ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ, ಕಂಪೌಂಡೇಬಲ್ ಪ್ರಕರಣಗಳು ಸೇರಿದಂತೆ ಇನ್ನೂ ಅನೇಕ ದಾಖಲಾದ ಹಾಗೂ ದಾಖಲಾಗತಕ್ಕ ಪ್ರಕರಣಗಳು ಸೇರಿವೆ ಎಂದು ತಿಳಿಸಿದರು.
ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಅರ್ಪಿತಾ ಉಪಸ್ಥಿತರಿದ್ದರು.