ಕುಮಟಾ: ಕೊಂಕಣ ರೈಲ್ವೆ ಮಾರ್ಗದಲ್ಲಿ ₹೫೦೦೦ ಕೋಟಿಗಳಿಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಮಂಜೂರಿ ಹಂತದಲ್ಲಿದ್ದು, ಮುಂದಿನ ೫ ವರ್ಷಗಳಲ್ಲಿ ಎಲ್ಲ ಯೋಜನೆಗಳು ಕಾರ್ಯಗತಗೊಳ್ಳುವ ವಿಶ್ವಾಸವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಹಳಕಾರ ಕ್ರಾಸ್‌ನಲ್ಲಿ ಸಿಗ್ನಲ್ ಲೈಟ್ ಹಾಕಿದ್ದೇವೆ. ಇಲ್ಲಿನ ನಿಲ್ದಾಣದ ಹೊರಗೆ ರಿಕ್ಷಾ ನಿಲ್ದಾಣ ಕಟ್ಟಿಕೊಡಲಿದ್ದೇವೆ. ಹೆಗಡೆ ಕ್ರಾಸ್‌ನಲ್ಲಿ ಮೇಲ್ಸೇತುವೆ ಆಗಬೇಕಾಗಿದ್ದು, ಶೇ. ೫೦ ಅನುದಾನ ರಾಜ್ಯ ಸರ್ಕಾರ ನೀಡಿದರೆ ನಿಗಮದಿಂದ ಉಳಿದ ಹಣಕಾಸು ಒದಗಿಸಿ ಕಾಮಗಾರಿ ಕೂಡಲೇ ಮಾಡಬಹುದಾಗಿದೆ. ಆದರೆ ಕೊಂಕಣ ರೈಲ್ವೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ನಿಗಮದೊಂದಿಗೆ ಮಹಾರಾಷ್ಟ್ರ, ಗೋವಾ ರಾಜ್ಯಗಳು ನೂರಾರು ಕೋಟಿಯಷ್ಟು ಹಣಕಾಸು ಸಹಯೋಗ ನೀಡಿವೆ. ಆದರೆ ನಮ್ಮ ಕರ್ನಾಟಕದ ಸರ್ಕಾರದ ಕೊಡುಗೆ ಏನೇನೂ ಇಲ್ಲ ಎನ್ನುವಷ್ಟು ತೀರಾ ಕಡಿಮೆ. ಆದರೂ ಜಿಲ್ಲೆಯ ಶಾಸಕರೊಂದಿಗೆ ಸೇರಿ ರಾಜ್ಯ ಸರ್ಕಾರದಿಂದ ಹಣಕಾಸು ಒದಗಿಸುವ ಪ್ರಯತ್ನದೊಂದಿಗೆ ಕೊಂಕಣ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತೇವೆ ಎಂದರು. ಕಳೆದ ೨ ವರ್ಷಗಳಿಂದ ಕೊಂಕಣ ರೈಲ್ವೆ ಚುಕ್ಕಾಣಿ ಹಿಡಿದಿರುವ ಸಂತೋಷಕುಮಾರ್ ಝಾ ಕೊಂಕಣ ರೈಲ್ವೆಯನ್ನು ಲಾಭದಾಯಕವಾಗಿಸಿದ್ದಾರೆ ಎಂದು ಪ್ರಶಂಸಿಸಿದರು.
ಕೊಂಕಣ ರೈಲ್ವೆಗಾಗಿ ಭೂಮಿ ಕಳೆದುಕೊಂಡವರ ೮೦೦ ಪ್ರಕರಣಗಳು ಇನ್ನೂ ಬಗೆಹರಿಯದೇ ಇತ್ತು. ಅವುಗಳಲ್ಲಿ ೭೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಇಲ್ಲಿನ ಭೂಸ್ವಾಧೀನಾಧಿಕಾರಿ ಪಿ. ಶ್ರವಣಕುಮಾರ ಸಹಕಾರದೊಂದಿಗೆ ಬಗೆಹರಿಸಿದ್ದೇವೆ ಎಂದರು. ಹಾಗೆಯೇ ಅಂಕೋಲಾ-ಹುಬ್ಬಳ್ಳಿ ರೈಲುಮಾರ್ಗ ನಾವು ಮಾಡಿಯೇ ಮಾಡುತ್ತೇವೆ. ಏಕೆಂದರೆ ಮಾಜಿ ಪ್ರಧಾನಿ ವಾಜಪೇಯಿ ಅವರು ಅಡಿಗಲ್ಲನ್ನಿಟ್ಟ ಯೋಜನೆಯಾಗಿರುವುದರಿಂದ ಪ್ರಧಾನಿ ಮೋದಿ ಅವರಿಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿಗೆ ರೈಲು ಸೇವೆಗಾಗಿ ನಾವೆಲ್ಲಾ ಹಲವಾರು ಹೋರಾಟ ಮಾಡಿದ್ದೇವೆ. ಬಳಿಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ಸಚಿವ ಜಾರ್ಜ ಫರ್ನಾಂಡಿಸ್ ಮುಂತಾದ ಕಾಲಘಟ್ಟದಲ್ಲಿ ನಮ್ಮ ಜಿಲ್ಲೆ ರೈಲ್ವೆ ಕಾಣುವಂತಾಯಿತು. ಕಾಚಿಗುಡ ರೈಲಿಗೆ ಹೊನ್ನಾವರ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು. ರೈಲುಗಳಲ್ಲಿ ನಿಲ್ದಾಣ ಮುನ್ಸೂಚನಾ ಪ್ರದರ್ಶನ ಹಾಗೂ ಶೌಚಗ್ರಹಗಳಿಗೆ ಸ್ಲೈಡಿಂಗ್ ಬಾಗಿಲು ಅಳವಡಿಸುವಂತೆ ವಿನಂತಿಸಿದರು.
ಸಮಾರಂಭದಲ್ಲಿ ಜಿಲ್ಲೆಯ ರೈಲ್ವೆ ಸೇವಾ ಸಮಿತಿ ಹಾಗೂ ರಾಜಸ್ಥಾನಿ ರೈಲ್ವೆ ಸೇವಾ ಸಮಿತಿಯಿಂದ ಸಂಸದ, ಶಾಸಕ ಹಾಗೂ ರೈಲ್ವೆ ಸಿಎಂಡಿ ಅವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್, ಕೊಂಕಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಆಶಾ ಶೆಟ್ಟಿ ಇದ್ದರು. ಯೋಗೇಶ ಕೊಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.