ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ೧೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕುಮಟಾ ತಾಲೂಕಿನ ಅಂತ್ರವಳ್ಳಿಯ ಕಡಸಾಲಗದ್ದೆಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ವತಿಯಿಂದ ಶನಿವಾರ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು.
ಕುಮಟಾ: ಕೃಷಿಯಲ್ಲಿ ನಾವು ಬೆಳೆದಿದ್ದನ್ನು ನಾವೇ ತಿನ್ನಬಹುದಾದಂತಹ ಸುರಕ್ಷಿತತೆ ಮೂಡುವಂತಿರಬೇಕು. ಭೂಮಿ ಶುದ್ಧವಾಗಿರಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ೧೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ''ವಿಶ್ವಾಸಕೆ, ವಿಕಾಸಕೆ, ಜನಕಲ್ಯಾಣಕೆ'' ಎಂಬ ಘೋಷವಾಕ್ಯದಡಿ ತಾಲೂಕಿನ ಅಂತ್ರವಳ್ಳಿಯ ಕಡಸಾಲಗದ್ದೆಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹಣ ಗಳಿಕೆಯ ದುರಾಸೆಗೆ ಬಿದ್ದು ಪರಿಸರ ಹಾಗೂ ಜನಸಮುದಾಯವನ್ನು ಶೋಷಿಸಿದರೆ ಸಂಪೂರ್ಣ ರೈತಾಬಿಯೇ ಶಾಪಗ್ರಸ್ತವಾಗಬಹುದು ಎಂದು ಎಚ್ಚರಿಸಿದ ಅವರು, ಹಸಿರು ಪರಿಸರ ಹೆಚ್ಚಿಸುವುದು ಹಾಗೂ ನೈಸರ್ಗಿಕ ಕೃಷಿಯ ಅವಲಂಬನೆಯಿಂದ ಮಳೆ-ಬೆಳೆ ಸಮಾನವಾಗಿ ಅಭಿವೃದ್ಧಿಗೊಂಡು ರೈತ ಮಾತ್ರವಲ್ಲದೇ ಸಂಪೂರ್ಣ ಮಾನವ ಬದುಕು ಹಸನಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತನ ಜವಾಬ್ದಾರಿ ಹಿಂದೆಂದಿಗಿಂತ ಹೆಚ್ಚಿದೆ. ಇಂದು ರಸಗೊಬ್ಬರಗಳಲ್ಲಿ ನೀಮ್ ಕೋಟಿಂಗ್, ನ್ಯಾನೋ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಬೆಳೆ ವಿಮೆ ಹಾಗೂ ಬೆಂಬಲೆಬೆಲೆ ಅತ್ಯಧಿಕ ಪ್ರಮಾಣದಲ್ಲಿ ರೈತನ ಕೈಸೇರುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯ ೨೩ನೇ ಕಂತು ಕೂಡಾ ರೈತನ ಖಾತೆಗೆ ಜಮಾ ಆಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ಸಾವಯವ ಗೊಬ್ಬರದ ಉಪಯೋಗ ಮತ್ತು ಮಹತ್ವದ ಹಾಗೂ ಮಣ್ಣಿನ ಸಾರ ಹಾಗೂ ಸುಧಾರಣೆಯ ವಿಧಾನಗಳು, ಜೀವಾಮೃತ ಬೀಜಾಮೃತ ಘನಜೀವಾಮೃತ ತಯಾರಿಸುವ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುವ ತಂತ್ರಗಳು, ರೋಗ ಮತ್ತು ನಿರ್ವಹಣೆಯ ನೈಸರ್ಗಿಕ ವಿಧಾನಗಳು, ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕ ಎನ್.ಡಿ. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಡಾ. ಜಿ.ಜಿ. ಹೆಗಡೆ, ಸದಾನಂದ ಭಟ್, ಡಿ.ಆರ್. ಹೆಗಡೆ, ರಾಧಾಕೃಷ್ಣ ಗೌಡ ಇತರರು ಇದ್ದರು. ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು. ಗಜಾನನ ಪೈ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.