
ಕಾರವಾರ: ತಾಲೂಕಿನ ಸದಾಶಿವಗಡದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದ ಬರೋಬ್ಬರಿ ₹57 ಕೋಟಿ ಭಾರಿ ವಂಚನೆ ಪ್ರಕರಣದ ತನಿಖೆಯಲ್ಲಿ ಇಲಾಖೆಗಳು ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ವಂಚಿತ ಗ್ರಾಹಕರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಗರದಲ್ಲಿ ಶನಿವಾರ ಗಾಂಧಿ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ವಂಚಿತ ಗ್ರಾಹಕರು, ಜೈದುರ್ಗಾಮಾತಾ ಸೌಹಾರ್ದ ಸಹಕಾರಿಯ ನಿರ್ದೇಶಕ ಲಿಂಗರಾಜು ಪುತ್ತು ಕಲ್ಗುಟಕರ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದರು.
ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಂಚಿತ ಗ್ರಾಹಕರ ಸಂಘದ ಕಾರ್ಯದರ್ಶಿ ಡಾ. ಗಜೇಂದ್ರ ನಾಯ್ಕ, ಸುಮಾರು 6000 ಅಮಾಯಕ ಗ್ರಾಹಕರಿಗೆ ₹57 ಕೋಟಿಗೂ ಅಧಿಕ ಹಣ ವಂಚಿಸಲಾಗಿದೆ. ಕಳೆದ ಒಂದು ವರ್ಷದಿಂದ ಸಂತ್ರಸ್ತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಐಡಿ ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧ ವಿಭಾಗವು ಇದುವರೆಗೂ ನ್ಯಾಯಾಲಯಕ್ಕೆ ಯಾವುದೇ ಚಾರ್ಜ್‌ಶೀಟ್ ಅಥವಾ ಪರಿಶೀಲನಾ ವರದಿ ಸಲ್ಲಿಸಿಲ್ಲ. ಸಹಕಾರಿ ಸಂಘಗಳ ಉನ್ನತ ಅಧಿಕಾರಿಗಳಿಂದಲೂ ಯಾವುದೇ ಸೂಕ್ತ ಸ್ಪಂದನೆ ಸಿಗುತ್ತಿಲ್ಲವಾಗಿದ್ದು, ಇದು ಹಗರಣವನ್ನು ಮುಚ್ಚಿಹಾಕುವ ಹುನ್ನಾರದಂತೆ ಕಂಡುಬರುತ್ತಿದೆ ಎಂದು ಆರೋಪಿಸಿದರು.ಇಲಾಖೆಗಳ ಮಂದಗತಿಯ ಕಾರ್ಯವೈಖರಿಯಿಂದ ಬೇಸತ್ತಿರುವ ಸಂತ್ರಸ್ತರು, ತಮ್ಮ ಬೆವರು ಸುರಿಸಿದ ಹಣವನ್ನು ಮರಳಿ ಪಡೆಯಲು ನೇರವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಜು. 15ರಂದು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂತ್ರಸ್ತರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತನಿಖೆ ಚುರುಕುಗೊಳಿಸಬೇಕು ಹಾಗೂ ತಪ್ಪಿತಸ್ಥರ ಆಸ್ತಿಯನ್ನು ಜಪ್ತಿ ಮಾಡಿ ತಮಗೆ ನ್ಯಾಯ ಒದಗಿಸಬೇಕು ಎಂದು ಅವರು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.