28ರಿಂದ ಆಶ್ರಯ ನಿವೇಶನ ನೋಂದಣಿ ಆರಂಭ: ಅರ್ಹ ಬಡವರಿಗೆ ಮಾತ್ರ ನಿವೇಶನ ಹಂಚಿಕೆ

KannadaprabhaNewsNetwork |  
Published : Jun 21, 2026, 02:30 AM IST
ಬ್ಯಾಡಗಿ ಪಟ್ಟಣದ ಪುರಸಭೆಯಲ್ಲಿರುವ ಆಶ್ರಯ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣದ ಪುರಸಭೆಯಲ್ಲಿರುವ ಆಶ್ರಯ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.

ಬ್ಯಾಡಗಿ: ಪಟ್ಟಣದ ಬಹುಕಾಲದ ಆಶ್ರಯ ನಿವೇಶನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಜೂ. 28ರಿಂದ ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆ ಹಾಗೂ ಫಲಾನುಭವಿಗಳ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿರುವ ಆಶ್ರಯ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಡ ಹಾಗೂ ನಿವೇಶನವಿಲ್ಲದ ಕುಟುಂಬಗಳಿಗೆ ನಿವೇಶನ ಒದಗಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಆಶ್ರಯ ಸಮಿತಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಲೋಪದೋಷ ಪರಿಶೀಲನೆ: ಈ ಹಿಂದೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳು ಹಾಗೂ ಲೋಪಗಳು ಕಂಡು ಬಂದಿದ್ದವು. ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅನರ್ಹರನ್ನು ಪಟ್ಟಿಯಿಂದ ಕೈಬಿಟ್ಟು, ನಿಜವಾದ ಅರ್ಹ ಬಡ ಕುಟುಂಬಗಳಿಗೆ ಮಾತ್ರ ನಿವೇಶನ ನೀಡಲು ನಿರ್ಧರಿಸಲಾಗಿದೆ. ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

414 ಮನೆ ಹಂಚಿಕೆ: ಒಟ್ಟು 414 ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿಯೊಂದು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಯಾವುದೇ ಅನ್ಯಾಯವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಅಡೆ ತಡೆ ನಿವಾರಣೆ: ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೆಶಿಮಿ ಮಾತನಾಡಿ, ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ. ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ, ಜೂ.28ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಪುರಸಭೆಗೆ ಆಗಮಿಸಬೇಕು ಎಂದು ಮನವಿ ಮಾಡಿದರು.

ವಂತಿಕೆ ಹಣ ವಾಪಸ್: ಆಶ್ರಯ ಮನೆಗಳಿಗಾಗಿ ಈ ಹಿಂದೆ 30 ಸಾವಿರ ವಂತಿಕೆ ಪಾವತಿಸಿದ್ದ 500ಕ್ಕೂ ಹೆಚ್ಚು ಅರ್ಜಿದಾರರಿಗೆ ಹಣವನ್ನು ಹಿಂತಿರುಗಿಸುವ ಕುರಿತು ಮಹತ್ವದ ಮಾಹಿತಿ ನೀಡಿದ ಅವರು, ಆಶ್ರಯ ಸಮಿತಿಯು ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಪ್ರತಿಯೊಬ್ಬರಿಗೂ ಅವರು ಪಾವತಿಸಿದ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಲಾಗುವುದು. ಫಲಾನುಭವಿಗಳು ತಮ್ಮ ಬಳಿಯಿರುವ ರಸೀದಿ ಹಾಗೂ ಸಂಬಂಧಿತ ದಾಖಲೆ ಪುರಸಭೆಗೆ ಸಲ್ಲಿಸಿದ ಬಳಿಕ ಪರಿಶೀಲಿಸಿ ಹಣ ಮರು ಪಾವತಿ ಮಾಡಲಾಗುವುದು. ಈ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಮಜೀದ್ ಮುಲ್ಲಾ ಲಕ್ಷ್ಮೀ ಬೊಮ್ಮಲಾಪುರ, ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಸಿಬ್ಬಂದಿ ವಿ.ಎಮ್. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ನರ ಸೈಟ್ ಹರಾಜು: ಬೆಟ್ಟದ ಮಲ್ಲೇಶ್ವರ ಆಶ್ರಯ ಬಡಾವಣೆಯಲ್ಲಿ ಖಾಲಿಯಿರುವ ಸುಮಾರು 70ಕ್ಕೂ ಹೆಚ್ಚು ಕಾರ್ನರ್ ಸೈಟ್‌ಗಳನ್ನು ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲಾಗುವುದು, ಈ ಕುರಿತು ಹರಾಜು ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿಯೇ ಪುರಸಭೆಯಿಂದ ನೀಡಲಾಗುವುದು ಎಂದು ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಯರೇಶಿಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ ಜಗತ್ತಿಗೆ ಯೋಗ ಗುರು: ಅಭಿನವ ಕರಿಬಸವ ಶ್ರೀಗಳು
ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ