ನಮ್ಮ ಮೆಟ್ರೋ ನೀಲಿ ಮಾರ್ಗ : ಚಿಕ್ಕಜಾಲ, ಬೆಟ್ಟಹಲಸೂರಿನಲ್ಲಿ ಮೆಟ್ರೋ ನಿಲ್ದಾಣ ಅನುಮಾನ

KannadaprabhaNewsNetwork | Updated : Sep 17 2024, 07:25 AM IST

ಸಾರಾಂಶ

ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ (2ಬಿ ಹಂತ) ಬೆಟ್ಟಹಲಸೂರು, ಚಿಕ್ಕಜಾಲ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೈಬಿಡುವ ಸಾಧ್ಯತೆಯಿದೆ.

 ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ (2ಬಿ ಹಂತ) ಬೆಟ್ಟಹಲಸೂರು, ಚಿಕ್ಕಜಾಲ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೈಬಿಡುವ ಸಾಧ್ಯತೆಯಿದೆ.

₹140 ಕೋಟಿ ವೆಚ್ಚದ ಬೆಟ್ಟಹಲಸೂರು, ₹130 ಕೋಟಿ ವೆಚ್ಚದ ಚಿಕ್ಕಜಾಲ ನಿಲ್ದಾಣ ಮಾಡಲು ಉದ್ದೇಶಿಸಲಾಗಿತ್ತು. ಅನುದಾನ ಸಮಸ್ಯೆ ಹಾಗೂ ಮೂಲ ಡಿಪಿಆರ್‌ನಲ್ಲಿ ಇವೆರಡು ನಿಲ್ದಾಣಗಳ ಪ್ರಸ್ತಾಪ ಇಲ್ಲದ ಕಾರಣಕ್ಕೆ ಇವೆರಡು ನಿಲ್ದಾಣಗಳನ್ನು ನಿರ್ಮಿಸದಿರಲು ನಿರ್ಧಾರವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

36.44 ಕಿ.ಮೀ. ಉದ್ದದ ನಮ್ಮಮೆಟ್ರೋ 2ಬಿ ಹಂತದಲ್ಲಿ 17 ನಿಲ್ದಾಣಗಳು ತಲೆ ಎತ್ತಲಿವೆ. ಮೂಲ ಡಿಪಿಆರ್‌ನಲ್ಲಿ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳು ಇರಲಿಲ್ಲ. ಆದರೆ ಸ್ಥಳೀಯರ ಒತ್ತಡ ಸೇರಿದಂತೆ ವಿವಿಧ ಕಾರಣಕ್ಕೆ ಈ ನಿಲ್ದಾಣಗಳನ್ನು ಬಳಿಕ ಸೇರಿಸಲಾಗಿತ್ತು. 2019ರಲ್ಲಿ ರಾಜ್ಯ ಸಚಿವ ಸಂಪುಟ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಆದರೆ, ಮೂಲ ಡಿಪಿಆರ್‌ನಲ್ಲಿ ಪ್ರಸ್ತಾಪ ಇಲ್ಲದ ಕಾರಣಕ್ಕೆ ಕೇಂದ್ರದಿಂದ ಇದಕ್ಕೆ ಅನುದಾನ ಸಿಗುತ್ತಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಸಂಪೂರ್ಣ ಮೊತ್ತ ಭರಿಸಬೇಕಾಗುತ್ತದೆ. ಅದರಲ್ಲಿ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಗ್ರೂಪ್ ಆಸಕ್ತಿ ತೋರಿಸಿತ್ತು. ಆದರೆ, ಈಗ ಗ್ರೂಪ್ ಸಹ ಅನುದಾನ ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬಹುತೇಕ ಈ ನಿಲ್ದಾಣಗಳ ನಿರ್ಮಾಣ ಅನುಮಾನವಾಗಿದೆ.

ಹಾಲುಣಿಸಲು ತಾಯಿ ಪರದಾಟ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ಸೂಕ್ತ ಸ್ಥಳವಿಲ್ಲದೆ ಮಹಿಳೆ ಪರದಾಡಿದ ಘಟನೆ ನಡೆದಿದೆ. ಮೆಟ್ರೋ ಪ್ರಯಾಣಕ್ಕೆ ಬಂದ ಮಹಿಳೆ ಮಗುವಿಗೆ ಹಾಲುಣಿಸಲು ಸುತ್ತಮುತ್ತ ಸ್ಥಳ ಹುಡುಕಿ ಬಳಿಕ ಪ್ಲಾಟ್‌ಫಾರ್ಮ್‌ ಬಳಿಯ ಮರೆಗೆ ಹೋಗಿರುವುದು ನಿಲ್ದಾಣದ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಹಾಲುಣಿಸುವ ಕೇಂದ್ರ ಇದೆ. ಆದರೆ, ಬೇರೆ ನಿಲ್ದಾಣಗಳಲ್ಲಿ ಈ ಸೌಲಭ್ಯ ಇಲ್ಲ. ಎಲ್ಲ ನಿಲ್ದಾಣಗಳಲ್ಲೂ ಆರೈಕೆ ಕೇಂದ್ರವನ್ನು ತೆರೆಯಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Share this article