- ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾಹಿತಿ । 2041ರ ಅಭಿವೃದ್ಧಿ ರೇಖೆ ಜತೆ 15 ವರ್ಷಗಳ ದೂರದೃಷ್ಟಿಯ ಕ್ರಿಯಾ ಯೋಜನೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಂದಿನ 15 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳ ಸರ್ವಾಂಗೀಣ ವಿಕಾಸಕ್ಕೆ ನೀಲನಕ್ಷೆ ತಯಾರಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಮೃತ್ ಯೋಜನೆಯಡಿ 2031ರವರೆಗೆ ಅಭಿವೃದ್ಧಿಯ ರೇಖೆ ನಿಗದಿ ಪಡಿಸಲಾಗಿದೆ. ಆದರೆ, ಈ ಪ್ರಾಧಿಕಾರವು 2041ರ ರೇಖೆಯನ್ನು ನಿಗದಿಪಡಿಸಿಕೊಂಡು ಇಂದಿನ ಜನಸಂಖ್ಯೆಗೆ ಹೆಚ್ಚುವರಿ ಯಾಗಿ 15 ಲಕ್ಷ ಜನಸಂಖ್ಯೆಯನ್ನು ಹೆಚ್ಚುವರಿಯಾಗಿ ಪರಿಗಣಿಸಿ, ನಗರಾಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಈ ಕ್ರಿಯಾ ಯೋಜನೆಯಲ್ಲಿ ನಗರದಲ್ಲಿ ವಿಶಾಲವಾದ ರಸ್ತೆಗಳ ನಿರ್ಮಾಣ, ಉದ್ಯಾನವನಗಳು, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು, ಚರಂಡಿ, ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಪ್ರವಾಸೋದ್ಯಮ, ಉದ್ಯೋಗ ಸೃಜನೆ, ನಗರದ ಸಂಚಾರ ದಟ್ಟಣೆ, ವರ್ತುಲ ರಸ್ತೆಗಳ ನಿರ್ಮಾಣ ಮುಂತಾದ ಅನೇಕ ಮಹತ್ವದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.2012ರಲ್ಲಿ ಪ್ರಸ್ತಾಪಿತ ನಗರದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯದಲ್ಲಿ ಉಳಿದ ರಸ್ತೆಯ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲು ಉದ್ದೇಶಿಸಲಾಗಿದೆ. ಅಲ್ಲದೇ, ಶಿವಮೊಗ್ಗ, ಭದ್ರಾವತಿ, ಸೋಗಾನೆ, ಹೊಳೆಹನಸವಾಡಿ ಸೇರಿದಂತೆ ಶಿವಮೊಗ್ಗ ನಗರದ ನಾಲ್ಕು ದಿಕ್ಕುಗಳಲ್ಲಿಯೂ ನಗರಾಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದ ಅವರು, ಊರುಗಡೂರು ಪ್ರದೇಶದಲ್ಲಿ ಉದ್ದೇಶಿತ ಬಡಾವಣೆಯಲ್ಲಿನ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ 7000-8000 ಅರ್ಜಿಗಳು ಬಂದಿದ್ದು, ಅವುಗಳನ್ನು ಭೂ ಮಾಲೀಕರಿಗೆ, ಪರಿಶಿಷ್ಟ ಜಾತಿ-ಪಂಗಡದವರಿಗೆ, ಹಿಂದುಳಿದ ವರ್ಗದವರಿಗೆ, ನೌಕರ ರಿಗೆ, ಸಾಮಾನ್ಯ ವರ್ಗದವರಿಗೆ, ವಿಕಲಾಂಗರಿಗೆ, ಕಲೆ, ವಿಜ್ಞಾನ, ಕ್ರೀಡೆ, ಮಾಧ್ಯಮ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಪ್ರಾಧಿಕಾರದ ವತಿಯಿಂದ ಇನ್ನಷ್ಟು ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಂಪರ್ಕಿಸಿ, 100ಎಕರೆ ಭೂಮಿಯನ್ನು ಪ್ರಾಧಿಕಾರಕ್ಕೆ ಒದಗಿಸಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ನಗರದ ಹೊರವಲಯ ಸೋಗಾನೆ ಸರ್ವೇ ನಂ.156ರಲ್ಲಿ 100 ಎಕರೆ ಜಮೀನನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮುಂದಿನ ಕ್ರಮ ವಹಿಸಲಾಗುವುದು ಎಂದರು.ಗೋಪಿಶೆಟ್ಟಿಕೊಪ್ಪದಲ್ಲಿ 50:50 ಒಡಂಬಡಿಕೆಯನ್ವಯ ಬಡಾವಣೆ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಮುಂದಾಗಿದ್ದಾರೆ. ಅವರಲ್ಲೂ ಅನೇಕ ರೈತರೊಂದಿಗೆ ಒಂದೆರೆಡು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಅಂತಿಮ ಸುತ್ತಿನ ಮಾತುಕತೆ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ನಿಧಿಗೆಯಲ್ಲಿ 3ಎಕರೆ ಕಾಯ್ದಿರಿಸಿದ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಶೀಘ್ರದಲ್ಲಿ ಕ್ರಮ ವಹಿಲಾಗುತ್ತಿದೆ. ಅಲ್ಲದೇ ಭದ್ರಾವತಿಯಲ್ಲಿಯೂ 34ಎಕರೆ ಭೂಪ್ರದೇಶವನ್ನು ಬಡಾವಣೆ ನಿರ್ಮಾಣಕ್ಕೆ ಕಾಯ್ದಿರಿಸಿಲಾಗಿದೆ ಎಂದು ವಿವರಿಸಿದರು.
ಅಟಲ್ ಬಿಹಾರಿ ವಾಜಪೇಯಿ ಲೇಔಟ್‍ನಲ್ಲಿನ ಅಕ್ರಮ ನಿವೇಶನ ಹಂಚಿಕೆಯನ್ನು ಈಗಾಗಲೇ ರದ್ದುಗೊಳಿಸ ಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದ ಅವರು ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ರಾಜ್ಯದ ಮಾದರಿ ನಗರಗಳನ್ನಾಗಿ ಸೃಜಿಸಲು ಹಾಗೂ ಪ್ರದೇಶದಲ್ಲಿ ಹಸಿರು ಕಂಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಎಚ್.ರವಿಕುಮಾರ್, ಮಹ್ಮದ್ ಯೂಸೂಫ್, ರೇಣುಕಮ್ಮ ಸೇರಿದಂತೆ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ಇದ್ದರು.ಪ್ರಾಧಿಕಾರದಿಂದಲೇ ಗುಂಪುಮನೆ ಸಮುಚ್ಛಯ
ಭದ್ರಾವತಿ-ಶಿವಮೊಗ್ಗ ಅವಳಿ ನಗರಗಳಲ್ಲಿನ 30 ಉದ್ಯಾನವನಗಳ ಅಭಿವೃದ್ಧಿಗೆ 2 ರಿಂದ 3 ದಿನದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಪ್ರಾಧಿಕಾರದ ವ್ಯಾಪ್ತಿಗೊಳಪಡುವ 15 ಕೆರೆಗಳ ಅಭಿವೃದ್ಧಿಗೆ 35 ಕೋ.ರು.ಗಳನ್ನು ಕಾಯ್ದಿರಿಸಲಾಗಿದೆ. ಮಿಂಚಿನ ವೇಗದಲ್ಲಿ ಬೆಳೆಯುತ್ತಿರುವ ನಗರದಲ್ಲಿ ಜನಸಾಮಾನ್ಯರು ನಿವೇಶನಗಳನ್ನು ಖರೀದಿಸಿ, ತಮ್ಮ ಕನಸಿನ ಮನೆ ನಿರ್ಮಿಸಿ ಕೊಳ್ಳುವುದು ಕಷ್ಟಸಾಧ್ಯವೆಂದರಿತು ಪ್ರಾಧಿಕಾರದ ವತಿಯಿಂದಲೇ ಗುಂಪುಮನೆ ಸಮುಚ್ಛಯ ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಊರುಗಡೂರು ಪ್ರದೇಶದಲ್ಲಿ ನಾಲ್ಕು ಎಕರೆ ಭೂಮಿಯನ್ನು ಸೋಮಿನಕೊಪ್ಪ-ಜೆ.ಎಚ್. ಪಟೇಲ್ ಬಡಾವಣೆಗಳಲ್ಲಿ 1.10 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಗೋಪಾಳ ಬಡಾವಣೆ ಹಾಗೂ 100 ಅಡಿ ರಸ್ತೆಯಲ್ಲಿ ಪ್ರಾಧಿಕಾರದ ವತಿಯಿಂದಲೇ ವಾಣಿಜ್ಯ ಮಳಿಗೆ ಮಾಲ್‍ಗಳನ್ನು ನಿರ್ಮಿಸಲಾಗುವುದು ಎಂದು ಸುಂದರೇಶ್ ಮಾಹಿತಿ ನೀಡಿದರು.