ಅರ್ಜುನ್ ಸಹೋದರನ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗ : ಗಂಗಾವಳಿಯ ಲಾರಿಯಲ್ಲಿ ಪತ್ತೆಯಾಗಿದ್ದು ಅರ್ಜುನನದ್ದೇ ಶವ

KannadaprabhaNewsNetwork |  
Published : Sep 28, 2024, 01:25 AM ISTUpdated : Sep 28, 2024, 09:43 AM IST
ಅರ್ಜುನನ ಮೃತದೇಹವನ್ನು ಕೇರಳಕ್ಕೆ ಆ್ಯಂಬುಲೆನ್ಸ್‌ ಮೂಲಕ ಸಾಗಿಸಲಾಯಿತು. | Kannada Prabha

ಸಾರಾಂಶ

ಅರ್ಜುನ್ ಸಹೋದರನ ರಕ್ತದ ಮಾದರಿ ಸಂಗ್ರಹಿಸಿ ಹುಬ್ಬಳ್ಳಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೃತದೇಹದ ಡಿಎನ್‌ಎ ಪರೀಕ್ಷೆಯಲ್ಲಿ ಹೊಂದಾಣಿಕೆ ಆಗಿದ್ದರಿಂದ ಅರ್ಜುನದ್ದೆ ಶವ ಎಂದು ಖಚಿತವಾಯಿತು.

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿದ್ದ ಕೇರಳದ ಲಾರಿಯನ್ನು ಗಂಗಾವಳಿ ನದಿಯಿಂದ ಮೇಲಕ್ಕೆತ್ತಿದಾಗ ಕ್ಯಾಬಿನ್‌ನಲ್ಲಿ ದೊರೆತ ಮೃತದೇಹ ಲಾರಿ ಚಾಲಕ ಅರ್ಜುನ್‌ನದ್ದೆ ಎಂದು ಡಿಎನ್‌ಎ ಪರೀಕ್ಷೆಯಿಂದ ಖಚಿತವಾಗಿದ್ದರಿಂದ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

 ಅರ್ಜುನ ಸಹೋದರರಾದ ಜಿತಿನ್ ಹಾಗೂ ಅಭಿಜಿತ್ ಶವ ಪಡೆದು ಕೇರಳಕ್ಕೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ದರು. ಅರ್ಜುನ್ ಸಹೋದರನ ರಕ್ತದ ಮಾದರಿ ಸಂಗ್ರಹಿಸಿ ಹುಬ್ಬಳ್ಳಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೃತದೇಹದ ಡಿಎನ್‌ಎ ಪರೀಕ್ಷೆಯಲ್ಲಿ ಹೊಂದಾಣಿಕೆ ಆಗಿದ್ದರಿಂದ ಅರ್ಜುನದ್ದೆ ಶವ ಎಂದು ಖಚಿತವಾಯಿತು. ಶುಕ್ರವಾರ ಸಂಜೆ ಶಾಸಕ ಸತೀಶ್ ಸೈಲ್ ಸೇರಿದಂತೆ ಕ್ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜುನ್ ಕಳೆಬರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸತೀಶ್ ಸೈಲ್ ಅವರು, ಶಿರೂರು ದುರಂತದಲ್ಲಿ ಅರ್ಜುನ್ ಮೃತಪಟ್ಟಿರುವುದು ದುರದೃಷ್ಟಕರ. ಮಡಿದ ಅರ್ಜುನ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹5 ಲಕ್ಷ ನೀಡಲಾಗಿದ್ದರಿಂದ ಸ್ವತಃ ತಾವೇ ಕೇರಳಕ್ಕೆ ಹೋಗಿ ಅವರ ತಾಯಿ ಅವರ ಕೈಗೆ ಪರಿಹಾರದ ಚೆಕ್ ನೀಡುವುದಾಗಿ ತಿಳಿಸಿದರು. 

ಅಲ್ಲದೆ ಸ್ಥಳೀಯರ ಇಬ್ಬರ ಮೃತದೇಹ ಪತ್ತೆಯಾಗಬೇಕಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು. ಸ್ಥಳದಲ್ಲಿ ಕೇರಳ ರಾಜ್ಯದ ಮಂಜೇಶ್ವರ ಕ್ಷೇತ್ರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಇದ್ದು ಅರ್ಜುನ್ ಕಳೆಬರ ಸಾಗಿಸುವ ಕಾರ್ಯವನ್ನು ನೋಡಿಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರ್ಜುನ್ ಮೃತದೇಹ ಪತ್ತೆ ಮಾಡಲು ವಿವಿಧ ಕಾರ್ಯಾಚರಣೆ ನಡೆಸಲು ಸಹಕರಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಶಿರೂರು ದುರಂತ: 8ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

ಅಂಕೋಲಾ: ಶಿರೂರು ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ 3ನೇ ಹಂತದ ಕಾರ್ಯಾಚರಣೆ ಶುಕ್ರವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು ವಿದ್ಯುತ್ ಟವರ್‌ನ ಬಿಡಿಭಾಗ ಮತ್ತು ಆಲದ ಮರ ಪತ್ತೆಯಾಗಿದೆ.

ಶಾಸಕ ಸತೀಶ್ ಸೈಲ್ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ತಿಳಿಸಿದ್ದಾರೆ. ಜಗನ್ನಾಥ ಮತ್ತು ಲೋಕೇಶ ಅವರ ಕುಟುಂಬಕ್ಕೆ ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆಯನ್ನು ಪರಿಶೀಲಿಸುವಂತೆ ತಿಳಿಸಿದ್ದು, ಎರಡು ಕುಟುಂಬಸ್ಥರು ಘಟನಾ ಸ್ಥಳದಲ್ಲಿದ್ದರು.

ಸಂಪೂರ್ಣ ಸಹಕಾರ: ನಮ್ಮ ತಂದೆಯ ಅವಶೇಷಕ್ಕೆ ಕಾಯುತ್ತಿದ್ದೇವೆ ಎಂದು ಜಗನ್ನಾಥ ನಾಯ್ಕ ಅವರ ಪುತ್ರಿ ಕೃತಿಕಾ ತಿಳಿಸಿದ್ದಾರೆ. ಶಾಸಕ ಸತೀಶ ಸೈಲ್ ಅವರ ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ವಿಧಿ ವಿಧಾನ ಮಾಡುವುದಕ್ಕಾದರೂ ನಮ್ಮ ತಂದೆಯ ಅವಶೇಷಗಳಾದರೂ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಸಹಕರಿಸುತ್ತಿರುವ ವ್ಯವಸ್ಥೆಗೆ ಕೃತಜ್ಞತೆಗಳು ಎಂದರು.ಶಿರೂರು ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಲೋಕೇಶನ ಸಹೋದರ ವಿನೋದ ಅವರು ಸಹ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದು, ನಮ್ಮ ಸಹೋದರನ ಶವದ ಅವಶೇಷಗಳಾದರೂ ದೊರೆತರೆ ಸಂಪ್ರದಾಯದಂತೆ ವಿಧಿವಿಧಾನ ಮಾಡಬಹುದಿತ್ತು ಎಂದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?