ಹೆಲ್ಪ್ ಡೆಸ್ಕ್ ಆರಂಭಿಸಲು ರೈಲ್ವೆ ಪ್ರಯಾಣಿಕರ ಸಂಘದಿಂದ ಸಚಿವ ವಿ.ಸೋಮಣ್ಣಗೆ ಮನವಿ

KannadaprabhaNewsNetwork | Published : Sep 28, 2024 1:25 AM

ಸಾರಾಂಶ

ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ಸಾರ್ವಜನಿಕ ಹೆಲ್ಪ್ ಡೆಸ್ಕ್ ಆರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ, ಐತಿಹಾಸಿಕ ತಾಣಗಳ ಮಾಹಿತಿ ಕೇಂದ್ರ ತೆರೆಯುವ ಜತೆಯಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಆರಂಭಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಎಲ್ಲ ರೈಲ್ವೆಕೋಚ್‌ಗಳಲ್ಲಿ ಶಿವಮೊಗ್ಗ ಜಿಲ್ಲಾ ಐತಿಹಾಸಿಕ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ಧಚಿತ್ರವನ್ನು ಬೋಗಿಗಳಲ್ಲಿ ಅಳವಡಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಇನ್ನು ಪ್ರಗತಿ ಸಾಧಿಸಲು ಅಗತ್ಯ ರೈಲ್ವೆ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆ ಮತ್ತು ನಗರಕ್ಕೆ ಒದಗಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮೂಲಕ ಮಂಗಳೂರಿಗೆ ಹೊಸ ರೈಲ್ವೆ ಇಂಟರ್ ಸಿಟಿ ರೈಲು ಬಿಡಬೇಕು. ಇದರಿಂದ ಕೇರಳ, ಕೊಚ್ಚಿನ್, ಗುರುವಾಯುರು, ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಅನುಕೂಲ ವಾಗುತ್ತದೆ. ಶಿವಮೊಗ್ಗದಿಂದ ಮಂಗಳೂರು ನಗರಕ್ಕೆ ಸಂಪರ್ಕ ಸಿಗುತ್ತದೆ.

ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ 50 ಬೆಡ್‌ನ ರೈಲ್ವೆ ಯಾತ್ರಿನಿವಾಸ, ಲಗೇಜ್ ಲಾಕರ್ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ವಿತ್ ಸಿ.ಸಿ. ಟಿ.ವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಬೇಕು. 1, 2 ಮತ್ತು 3ನೇ ಫ್ಲಾಟ್ ಫಾರಂನಲ್ಲಿ ಮಹಿಳೆ ಫೀಡಿನ್ ಕ್ಯಾಬಿನ್ ಅಳವಡಿಸಬೇಕು. 2 ಮತ್ತು 3ನೇ ಪ್ಲಾಟ್ ಫಾರಂಗೆ ಅನುಗುಣವಾಗಿ ಶೌಚಗೃಹ ಕಟ್ಟಿಸಬೇಕು. ದಿನಕ್ಕೆ 8,000 ಜನರು ರೈಲ್ವೆ ಪ್ರಯಾಣಿಕರು ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ 2 ಮತ್ತು 3ನೇ ಫ್ಲಾಟ್ ಫಾರಂಗೆ ಎಕ್ಸ್ಲೇಟರ್ ಅಳವಡಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗದಿಂದ ಬೆಂಗಳೂರಿಗೆ ಗರೀಬಿರಥ ರೈಲು ಆರಂಭಿಸಬೇಕು. ಶಿವಮೊಗ್ಗದಿಂದ ಮುಂಬೈಗೆ ನೇರ ಸಂಪರ್ಕ ರೈಲನ್ನು ಓಡಿಸಬೇಕು. ಶಿವಮೊಗ್ಗ, ಬೀರೂರು ಜಂಕ್ಷನ್, ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ರೈಲು ಆರಂಭಿಸಬೇಕು. ಶಿವಮೊಗ್ಗದಿಂದ ಕಡಿಮೆ ದರದಲ್ಲಿ ಪ್ಯಾಸೆಂಜರ್ ರೈಲನ್ನು ದಿನದ ಅವಧಿಯಲ್ಲಿ ಶಿವಮೊಗ್ಗ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ, ಮಂತ್ರಾಲಯ ಮೂಲಕ ರಾಯಚೂರಿಗೆ ಆರಂಭಿಸಬೇಕು.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಾಹನದ ನಿಲ್ದಾಣವನ್ನು ಸಮಪರ್ಕವಾಗಿ ಮಾಡಬೇಕು. ರಾತ್ರಿ ವೇಳೆ ಲೈಟ್ ವ್ಯವಸ್ಥೆ ಮಾಡ ಬೇಕು. ಸೀನಿಯರ್ ಸಿಟಿಜನ್ ಕೋಟಾ ಮತ್ತು ಸೀನಿಯರ್ ಸಿಟಿಜನ್‌ಗೆ ಶೇ.50 ರಿಯಾಯಿತಿ ದರದ ಟಿಕೇಟ್‌ಅನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ವೇಳೆ ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದ ಡಾ. ದಿನೇಶ್, ಎನ್.ಗೋಪಿನಾಥ್(ಮಥುರಾ), ಜಿ.ವಿಜಯ್ ಕುಮಾರ್, ಕೆ.ರಂಗನಾಥ್, ಜಗದೀಶ್, ಮಂಜುನಾಥ್, ಐಡಿಯಲ್ ಗೋಪಿ, ಮಂಜು, ನೂರ್‌ ಅಹಮದ್, ವಿನೋದ, ಜೋಸೆಫ್, ಡಾ.ಶಿಶಿರಾ, ಸುರೇಶ ಶೆಟ್ಟಿ, ಡಾ.ಶಿವಕುಮಾರ್, ವೆಂಕಟೇಶ್, ವಸಂತ ಹೋಬಳಿದಾರ್, ನಾಗರಾಜ್ ಕಂಕಾರಿ, ಪಾಲಾಕ್ಷಿ ಉಪಸ್ಥಿತರಿದ್ದರು.

Share this article