ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಿಂದ ಮೈಸೂರು ತನಕ ಸುಮಾರು 92.335 ಕಿ.ಮೀ. ಉದ್ದದ ರಸ್ತೆ ನಾಲ್ಕು ಮತ್ತು ಆರು ಪಥಗಳ ಸುಸಜ್ಜಿತ ರಸ್ತೆಗಳ ಕಾಮಗಾರಿ ಪ್ರಾಥಮಿಕ ಹಂತದ ಕೆಲಸ ಈಗಾಗಲೇ ನಡೆಯುತ್ತಿದೆ.
ಕುಶಾಲನಗರ-ಮಡಿಕೇರಿ ಹೆದ್ದಾರಿ ರಸ್ತೆಯ ಗುಡ್ಡೆಹೊಸೂರು ವೃತ್ತದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದ ತೆಪ್ಪದಕಂಡಿ ಬಳಿಯಿಂದ ಆನೆಕಾಡು ತನಕ 25ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಇವರಿಗೆ ಈಗಾಗಲೇ ಸರ್ಕಾರದಿಂದ ಅಗತ್ಯ ಪರಿಹಾರ ಕೂಡ ನೀಡಲಾಗಿದೆ.ಯೋಜನಾ ಪ್ರದೇಶದಲ್ಲಿ ಸುಧಾರಿತ ರಸ್ತೆ ಸಂಪರ್ಕ ಕಾಮಗಾರಿ ಹಿನ್ನೆಲೆಯಲ್ಲಿ ತೆಪ್ಪದಕಂಡಿ ತೂಗು ಸೇತುವೆ ಎದುರು ಭಾಗದಲ್ಲಿ ಸುಮಾರು ಉದ್ದದ ತನಕ ನೆಲೆ ಕಂಡಿರುವ ಮನೆಗಳು ಹಾಗೂ ತೋಟಗಳನ್ನು ತೆರವುಗೊಳಿಸುವ ದೃಶ್ಯ ಕಂಡು ಬಂದಿದೆ.
ಮೈಸೂರು ಬಳಿಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬೈಲುಕುಪ್ಪೆ ಬಳಿ ಬೈಪಾಸ್ ಮೂಲಕ ಸಾಗಿ ಟಿಬೆಟಿಯನ್ ನಿರಾಶ್ರಿತ ಶಿಬಿರ ಮೂಲಕ ರಾಣಿ ಗೇಟ್ ನಂತರ ತೆಪ್ಪದಕಂಡಿ ಬಳಿ ಗುಡ್ಡೆಹೊಸೂರು- ಸಿದ್ದಾಪುರ ಸಾಗುವ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ.
ಈ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಹಾಗೂ ಫ್ಲೈ ಓವರ್ ಮೂಲಕ ಬಸವನಹಳ್ಳಿ ಬಳಿ ಕುಶಾಲನಗರ -ಮಡಿಕೇರಿ ಸಾಗುವ ರಸ್ತೆಯಲ್ಲಿ ಪ್ರಥಮ ಹಂತದ ಕಾಮಗಾರಿ ಕೊನೆಗೊಳ್ಳಲಿದೆ.
ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 2.3 ಕಿ.ಮೀ. ಉದ್ದದ ರಸ್ತೆ ಮಾತ್ರ ನಿರ್ಮಾಣಗೊಳ್ಳಲಿದ್ದು ಅಂದಾಜು 13.74 ಹೆಕ್ಟೇರ್ ವಿಸ್ತೀರ್ಣದ ಭೂಮಿಯ ಅಗತ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
25 ಕಟ್ಟಡಗಳಿಗೆ ಹಾನಿ:
ತೆಪ್ಪದಕಂಡಿ ಬಳಿ ಕಾವೇರಿ ನದಿಗೆ ಬೃಹತ್ ಗಾತ್ರದ ಸೇತುವೆ ನಿರ್ಮಾಣವಾಗಲಿದೆ.
ತೆಪ್ಪದಕಂಡಿ ಬಳಿ ರಾಜ್ಯ ಹೆದ್ದಾರಿ ಕೆಳಭಾಗದಲ್ಲಿ ಸಾಗಲಿದ್ದು ಚತುಷ್ಪಥ ರಸ್ತೆ ಫ್ಲೈಓವರ್ ಮೂಲಕ ಸಾಗಲಿದೆ. ಈ ಭಾಗದಲ್ಲಿ ಬೃಹತ್ ವೃತ್ತ ರಚನೆ ಆಗಲಿದೆ.
ಮೈಸೂರಿನಿಂದ ಕುಶಾಲನಗರ ಗಡಿ ತನಕ ಒಟ್ಟು 4128.92 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆ ನಡೆಯಲಿದ್ದು ಜಿಲ್ಲೆಯಲ್ಲಿ ಇದರ ವೆಚ್ಚ 92 ಕೋಟಿ ರು.ಗಳಾಗಿವೆ.ಹೆದ್ದಾರಿ ಕಾಮಗಾರಿಗೆ ಈಗಾಗಲೇ ಭೂ ಮತ್ತು ಆಸ್ತಿ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ ಬಹುತೇಕ ಪರಿಹಾರ ಮೊತ್ತವನ್ನು ಕೂಡ ಮನೆ ಆಸ್ತಿ ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
...........ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಕುಡಿಯುವ ನೀರಿನ ಮೂಲಗಳನ್ನು ಸ್ಥಳಾಂತರಿಸುವುದು, ಆಕಸ್ಮಿಕ ನಷ್ಟದ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಒದಗಿಸುವುದು. ಕಾಮಗಾರಿ ಸಂದರ್ಭ ಯಾವುದೇ ರೀತಿಯ ಜಲಮೂಲಗಳು ಕಲುಷಿತ ಆಗದಂತೆ ಎಚ್ಚರ ವಹಿಸಲಾಗುವುದು.-ಪ್ರಕಾಶ್, ಹಿರಿಯ ಪರಿಸರ ಅಧಿಕಾರಿ.
....................ರಸ್ತೆ ಹೆದ್ದಾರಿ ಅಭಿವೃದ್ಧಿ ಮತ್ತು ಅಗಲೀಕರಣ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸೂಚನೆಯಂತೆ ಸಂಬಂಧಿಸಿದ ಪ್ರದೇಶಗಳಲ್ಲಿ ಎಲ್ಲಾ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಗುಡ್ಡೆ ಹೊಸೂರು ಬಳಿಯ ತೆಪ್ಪದ ಕಂಡಿ ಬಳಿ ಮನೆ ಕಟ್ಟಡಗಳನ್ನು ಹಾಗೂ ತೋಟ ತೆರವು ಕಾರ್ಯ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ.
-ಕುಡೇಕಲ್ ಗಣೇಶ್, ಸ್ಥಳೀಯರು.