9 ಮೊಬೈಲ್‌ಗಳು, 4 ಬ್ಲೂಟೂತ್ ಡಿವೈಎಸ್, ವಾಕಿಟಾಕಿ ಜಪ್ತಿ
ಕನ್ನಡಪ್ರಭ ವಾರ್ತೆ ಯಾದಗಿರಿವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶನಿವಾರ (ಅ.28) ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾದಗಿರಿಯ ವಿವಿಧ ಕೇಂದ್ರಗಳಲ್ಲಿ ಕೆಲ ಅಭ್ಯರ್ಥಿಗಳು ಬ್ಲೂಟೂತ್ ದುರ್ಬಳಕೆ ಮಾಡಿಕೊಂಡು ನಕಲು ನಡೆಸಿದ್ದರು ಎನ್ನುವ ಆರೋಪದಡಿ ದಾಖಲಾದ ಪ್ರಕರಣದಲ್ಲಿ, ಬಂಧಿತ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳ ಮೂಲದ 9 ಜನರನ್ನು ಶನಿವಾರ ಸಂಜೆ ಇಲ್ಲಿನ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶ ರಾಹುಲ್ ಅವರೆದುರು ಹಾಜರುಪಡಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಶನಿವಾರ ಸಂಜೆ ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಜಿ.ಸಂಗೀತಾ, ಬ್ಲೂಟೂತ್ ಅಕ್ರಮ ಕುರಿತು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ನೀಡಿರುವ ದೂರಿನಂತೆ, ಐಪಿಸಿ ವಿವಿಧ ಕಲಂ ಗಳ ಅಡಿಯಲ್ಲಿ ನಗರ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದರು. (ಅಪರಾಧ ಸಂಖ್ಯೆ : 144/2023, 145/2023, 146/2023, 147/2023 ಹಾಗೂ 148/2023)
ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜು, ಸರ್ಕಾರ ಪದವಿ ಪೂರ್ವ ಕಾಲೇಜು, ಸಭಾ ಪಿಯು ಕಾಲೇಜು, ಮಹಾತ್ಮಾಗಾಂಧಿ ಪಿಯು ಕಾಲೇಜು ಹಾಗೂ ಎಲ್‌ಕೆಇಟಿ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಆರೋಪಿ ಅಭ್ಯರ್ಥಿಗಳು ಬ್ಲೂಟೂತ್ ನಕಲು ನಡೆಸಲೆತ್ನಿಸಿದ್ದರು ಎಂಬ ಆರೋಪದಡಿ, ಈ 9 ಜನರನ್ನು ಬಂಧಿಸಲಾಗಿತ್ತು.ಬಂಧಿತರಿಂದ 8 ಮೊಬೈಲ್, 4 ಬ್ಲೂಟೂತ್ ಡಿವೈಸ್, 2 ವಾಕಿಟಾಕಿ ಹಾಗೂ ನಕಲು ಮಾಡಲು ಅನುಕೂಲವಾಗಲೆಂದೇ ವಿಶೇಷವಾಗಿ ಹೊಲಿಸಲಾಗಿದ್ದ ಅಂಗಿ, ಬನಿಯನ್ ಹಾಗೂ ಒಳ ಉಡುಪುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರನ್ಯಾಶನಲ್ ಲಿಮಿಟೆಡ್ (ಎಂಎಸ್‌ಐಎಲ್) ಗಳಲ್ಲಿ ಖಾಲಿಯಿರುವ ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳ ಭರ್ತಿ ಮಾಡಲು ರಾಜ್ಯಾದ್ಯಂತ ಪರೀಕ್ಷೆಗಳನ್ನು ನಡೆಸಲಾಗಿತ್ತು.ಯಾದಗಿರಿ ಜಿಲ್ಲೆಯ 17 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದು, 7 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಶನಿವಾರ ಬೆಳಗ್ಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿದ್ದರಿಂದ, ಮಧ್ಯಾಹ್ನ ಹಾಗೂ ಮರುದಿನ (ಭಾನುವಾರ) ಪರೀಕ್ಷೆಗಳಲ್ಲಿ ಅಕ್ರಮಕ್ಕೆ ಸಿದ್ಧತೆ ನಡೆಸಿದ್ದ ಅನೇಕರು ಕಾಲ್ಕಿತ್ತು, ಗೈರಾಗಿದ್ದಾರೆನ್ನಲಾಗಿದೆ.
ಬಂಧಿತ ಆರೋಪಿಗಳು : ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕು ಸೊನ್ನ ಗ್ರಾಮದ ಸಿದ್ರಾಮ ಖಾನಾಪುರ, ಅಫಜಲ್ಪೂರ ತಾಲೂಕು ಚಿಂಚೋಳಿಯ ಸಾಗರ್ ಜಮಾದಾರ್, ಕಲಬುರಗಿಯ ಹಿರೇ ರಾಜಾಪೂರಿನ ನಿವಾಸಿ ನಿರಂಜನ್ ಸರಡಗಿ, ಅಫಜಲ್ಪೂರ ತಾಲೂಕು ಹಳಗಿಯ ಸಂತೋಷ್ ಸೊನ್ನ, ಡೊಣ್ಣೂರು ಗ್ರಾಮದ ಬಾಬುರಾವ್ ಸೊನ್ನ, ಜೇರಟಗಿಯ ಹಸನ್ ಸಾಬ್ ಮುಳ್ಳೊಳ್ಳಿ, ಅಫಜಲ್ಪುರದ ರಾಕೇಶ್ ಬಿರಾದರ್, ಬಾದರಹಳ್ಳಿಯ ಬಾಬುರಾವ್ ಜಮಾದಾರ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಆಲಮೇಲದ ಪ್ರವೀಣ್ ಪೋದ್ದಾರ ಬಂಧಿತ ಆರೋಪಿಗಳ ವಿಚಾರಣೆ ನಂತರ ಭಾನುವಾರ ಸಂಜೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.