ಬೆಂ.ದಕ್ಷಿಣ ಜಿಲ್ಲೆಗೂ ಬಿಎಂಟಿಸಿ ಬಸ್ ಸಂಚಾರ ವಿಸ್ತರಣೆ

KannadaprabhaNewsNetwork |  
Published : Sep 16, 2025, 12:03 AM IST
1.ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಪೂಜೆ ಸಲ್ಲಿಸಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಮನಗರ: ಮಹಾನಗರ ಪಾಲಿಕೆ ಗಡಿಯಿಂದ 40 ಕಿಲೋ ಮೀಟರ್ ವ್ಯಾಪ್ತಿವರೆಗೆ ಬಿಎಂಟಿಸಿ ಬಸ್ ಗಳ ಸಂಚಾರ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇಂದೇ ಆದೇಶ ಹೊರಡಿಸಲಾಗುವುದು. ಇದರಿಂದ ಬೆಂಗಳೂರು ದಕ್ಷಿಣ ಜಿಲ್ಲೆಗೂ ಬಿಎಂಟಿಸಿ ಬಸ್ ಗಳ ಸೇವೆ ಸಿಗಲಿದೆ ಎಂದು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ರಾಮನಗರ: ಮಹಾನಗರ ಪಾಲಿಕೆ ಗಡಿಯಿಂದ 40 ಕಿಲೋ ಮೀಟರ್ ವ್ಯಾಪ್ತಿವರೆಗೆ ಬಿಎಂಟಿಸಿ ಬಸ್ ಗಳ ಸಂಚಾರ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇಂದೇ ಆದೇಶ ಹೊರಡಿಸಲಾಗುವುದು. ಇದರಿಂದ ಬೆಂಗಳೂರು ದಕ್ಷಿಣ ಜಿಲ್ಲೆಗೂ ಬಿಎಂಟಿಸಿ ಬಸ್ ಗಳ ಸೇವೆ ಸಿಗಲಿದೆ ಎಂದು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ ಸಂಚಾರ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಶಾಸಕರ ಬೇಡಿಕೆಯಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕುಗಳಲ್ಲಿಯೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ ಎಂದರು.ಈ ಮೊದಲು ಕಾರ್ಪೋರೇಷನ್ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಮಾತ್ರ ಬಿಎಂಟಿಸಿ ಬಸ್ ಗಳು ಸಂಚರಿಸುತ್ತಿದ್ದವು. ಈಗ ಕಾರ್ಪೋರೇಷನ್ ಗಡಿಯಿಂದ 40 ಕಿಮೀ ವ್ಯಾಪ್ತಿವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬಿಎಂಟಿಸಿ ಬಸ್ ಗಳು ಸಂಚರಿಸುತ್ತಿದ್ದವು. ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೂ ಸೇವೆ ವಿಸ್ತರಣೆಯಾಗಿದೆ ಎಂದು ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಅಧಿವೇಶನದಲ್ಲಿ ಜಿಲ್ಲಾ ಕೇಂದ್ರ ರಾಮನಗರಕ್ಕೆ ನಗರ ಸಾರಿಗೆ ಬಸ್ ಬೇಕೆಂದು ಮನವಿ ಮಾಡಿದ್ದರು. ಅದರಂತೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಈ ಹಿಂದೆಯೇ ಸುರೇಶ್ ಸಂಸದರಾಗಿದ್ದಾಗ ನಾನು ಇಂಧನ ಇಲಾಖೆ ಸಚಿವನಾಗಿದ್ದೆ. ಆಗಲೂ ಜೆನರ್ಮ್ ಯೋಜನೆ ಅಡಿಯಲ್ಲಿ ನಗರ ಸಾರಿಗೆ ಬಸ್ ಹಾಕಿಸಿದ್ದೆವು. ಅದು ಯಶಸ್ವಿಯಾಗಲಿಲ್ಲ. ಈಗ ನಗರವೂ ಬೆಳೆದಿದ್ದು, ಶಾಲಾ - ಕಾಲೇಜುಗಳು ಹೆಚ್ಚಿವೆ. ಜನಸಂಖ್ಯೆಯೂ ಹೆಚ್ಚಿರುವ ಕಾರಣ ನಗರ ಸಾರಿಗೆ ಬಸ್‌ಗಳು ಸದುಪಯೋಗವಾಗುವ ವಿಶ್ವಾಸವಿದೆ ಎಂದು ಹೇಳಿದರು.

ಬಸ್ ನಿಲ್ದಾಣಕ್ಕೆ ಜಾಗ ಒದಗಿಸಿ ಕೊಡಿ :

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಇಕ್ಬಾಲ್ ಹುಸೇನ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಿಕೊಟ್ಟಲ್ಲಿ ಅದನ್ನು ನಿರ್ಮಿಸಿಕೊಡುತ್ತೇವೆ. ಅಲ್ಲದೆ ಈಗಿರುವ ಬಸ್ ನಿಲ್ದಾಣವನ್ನು ನವೀಕರಣಗೊಳಿಸಲು ಕ್ರಮ ವಹಿಸಲಾಗುವುದು. ಸಾತನೂರಿಗೆ ಡಿಪೋ ನಿರ್ಮಿಸಿಕೊಡುತ್ತೇವೆ ಎಂದು ತಿಳಿಸಿದರು.

ಬಿಎಂಟಿಸಿನಲ್ಲಿ ಸಾಕಷ್ಟು ಬಸ್‌ಗಳಿವೆ. ಆದರೆ, ಕೆಎಸ್ ಆರ್ ಟಿಸಿ ನಲ್ಲಿ ಬಸ್ ಸಂಖ್ಯೆ ಕಡಿಮೆ ಇತ್ತು. 2019 ರಿಂದ 2023ರವರೆಗೆ ನಾನಾ ಕಾರಣಗಳಿಂದ ಬಸ್ ಗಳನ್ನು ಖರೀದಿ ಮಾಡಿರಲಿಲ್ಲ. ನಾನು ಸಾರಿಗೆ ಸಚಿವನಾದ ಮೇಲೆ 600 ಎಲೆಕ್ಟ್ರಾನಿಕ್ ಬಸ್ ಗಳು ಸೇರಿದಂತೆ ಒಟ್ಟು 5800 ಬಸ್ ಗಳನ್ನು ಖರೀದಿ ಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಅಲ್ಲದೆ, 2016ರ ನಂತರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿಯೂ ಆಗಿರಲಿಲ್ಲ. ಈಗ 10 ಸಾವಿರ ಮಂದಿಯ ನೇಮಕಾತಿ ಆಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಗರ ಸಾರಿಗೆ ಬಸ್ ಸಂಚಾರ ಬೇಕೆಂದು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮನವಿ ಮಾಡುತ್ತಿದ್ದರು. ಇದೀಗ ಬಹು ದಿನಗಳ ಕನಸು ನನಸಾಗುತ್ತಿದೆ. ನಗರದಲ್ಲಿ ರಸ್ತೆಗಳು ಚಿಕ್ಕದಾಗಿರುವ ಕಾರಣ ಮಿನಿ ಬಸ್ ಗಳನ್ನು ಒದಗಿಸುವಂತೆ ಮಾಡಿದ ಮನವಿಗೆ ಸಾರಿಗೆ ಸಚಿವರು ಸ್ಪಂದಿಸಿದ್ದಾರೆ. ಇದರಿಂದ ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಆಗಮಿಸುತ್ತಾರೆ. ಹಾಗಾಗಿ ಕೈಗಾರಿಕಾ ಪ್ರದೇಶದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದ ನವೀಕರಣಗೊಳಿಸಬೇಕು. ಇನ್ನೂ 25ಸಾರಿಗೆ ಬಸ್ ಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ಬಡವರಿಗೆ ನಿವೇಶನ ಕಲ್ಪಿಸಲು 260 ಎಕರೆ ಗೋಮಾಳ ಗುರುತಿಸಿದ್ದೇವೆ. ರಸ್ತೆ, ಚರಂಡಿ ಕೆಲಸಗಳು ನಡೆಯುತ್ತಿದ್ದು, ಪ್ರತಿ ಮನೆಗೆ ಕಾವೇರಿ ನೀರು ಪೂರೈಸುವ, ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಆಶೀರ್ವಾದ ಇದೆ. ಚುನಾವಣೆಯಲ್ಲಿ ಸೋತರು ಸಹ ಡಿ.ಕೆ.ಸುರೇಶ್ ರವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಜಿಲ್ಲಾ ಕೇಂದ್ರ ರಾಮನಗರಕ್ಕೆ ಬಿಎಂಟಿಸಿ ಬಸ್ ಗಳ ಸೇವೆ ವಿಸ್ತರಣೆ ಮಾಡಿರುವುದು ಹಾಗೂ ನಗರ ಸಾರಿಗೆ ಬಸ್ ಗಳ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ಎಚ್.ವಿ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಿರ್ದೇಶಕ ಪರ್ವಿಜ್ ಪಾಷ, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಅಜ್ಮತ್, ಆರೀಫ್, ಬೈರೇಗೌಡ, ಮೋಯಿನ್ ಖುರೇಷಿ, ನಾಗಮ್ಮ, ಪಾರ್ವತಮ್ಮ, ಗಿರಿಜಮ್ಮ, ಜಯಲಕ್ಷ್ಮಮ್ಮ, ಪವಿತ್ರ, ನಿಜಾಮುದ್ದೀನ್ ಷರೀಫ್, ಸಮದ್, ಆಯುಕ್ತ ರಾಜಣ್ಣ, ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪುರುಷೋತ್ತಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮುಖಂಡರಾದ ಸಿಎನ್ ಆರ್ ವೆಂಕಟೇಶ್, ರವಿ ಉಪಸ್ಥಿತರಿದ್ದರು.

ಕೋಟ್ ................

ಈ ಮೊದಲು ಸಾರಿಗೆ ಬಸ್ ಗಳಲ್ಲಿ 85 ಲಕ್ಷ , ಈಗ 1ಕೋಟಿ 7 ಲಕ್ಷ ಜನರು ಸಂಚರಿಸುತ್ತಿದ್ದಾರೆ. ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿನಿತ್ಯ 60 ರಿಂದ 65 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ನಿನ್ನೆವರೆಗೆ 542 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದಕ್ಕೆ 13 ಸಾವಿರ ಕೋಟಿ ಖರ್ಚಾಗಿದೆ. ಸಮೀಕ್ಷೆಯೊಂದರ ಪ್ರಕಾರ ಉಚಿತ ಬಸ್ ನಿಂದಾಗಿ ಶೇಕಡ 23ರಷ್ಟು ಉದ್ಯೋಗ ಸೃಷ್ಟಿಯಾಗಿದೆ.

- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

(ಒಂದು ಫೋಟೋ ಪ್ಯಾನಲ್‌ನಲ್ಲಿ ಬಳಸಬಹುದು)

15ಕೆಆರ್ ಎಂಎನ್ 1,2.ಜೆಪಿಜಿ

ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಪೂಜೆ ಸಲ್ಲಿಸಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

2.

ರಾಮನಗರ ಸಾರಿಗೆ ಬಸ್‌ನಲ್ಲಿ ಟಿಕೆಟ್ ಪಡೆದು ಸಚಿವ ರಾಮಲಿಂಗಾರೆಡ್ಡಿ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಯಾಣಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ