ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಖಾಸಗಿ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸದ್ಯ ನಗರದಲ್ಲಿ 1 ಕೋಟಿಗೂ ಹೆಚ್ಚಿನ ವಾಹನಗಳಿವೆ. ಆದರೆ, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾಗಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಬಸ್‌ಗಳಲ್ಲಿ ಒತ್ತಡ ಹೆಚ್ಚುವಂತಾಗಿದೆ.
ಬಿಎಂಟಿಸಿ ಅಂಕಿ ಅಂಶದ ಪ್ರಕಾರ 2017-18ರಿಂದ 2023-24ರ ಜನವರಿವರೆಗೆ 3,375 ಬಸ್‌ಗಳನ್ನು ಗುಜರಿಗೆ ಹಾಕಲಾಗಿದೆ. ಆದರೆ, ಇದೇ ಅವಧಿಯಲ್ಲಿ ನಿಗಮಕ್ಕೆ 3,370 ಬಸ್‌ಗಳು ಮಾತ್ರ ಸೇರ್ಪಡೆಯಾಗಿವೆ. ಪ್ರಯಾಣಿಕರ ಸಂಖ್ಯೆಯನ್ವಯ ಬಿಎಂಟಿಸಿ ಸಮರ್ಪಕವಾಗಿ ಸೇವೆ ನೀಡಲು ಕನಿಷ್ಠ 10 ಸಾವಿರ ಬಸ್‌ಗಳ ಅವಶ್ಯಕತೆಯಿದೆ. ಆದರೆ, ಸದ್ಯ 6 ಸಾವಿರ ಬಸ್‌ಗಳು ಮಾತ್ರ ಸೇವೆಗೆ ಲಭ್ಯವಿದೆ. ಪ್ರಸಕ್ತ ವರ್ಷದಲ್ಲಿ 1,900 ಹೊಸ ಬಸ್‌ಗಳ ಸೇರ್ಪಡೆಗೆ ಸರ್ಕಾರ ಮುಂದಾಗಿದೆಯಾದರೂ ಅಂಕಿ ಅಂಶಗಳನ್ನು ಗಮನಿಸಿದರೆ ಆ ಸಂಖ್ಯೆಯೂ ಕಡಿಮೆಯಾಗಲಿದೆ.ಹೀಗಾಗಿ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗದ ಕಾರಣ ಟ್ರಿಪ್‌ಗಳ ಸಂಖ್ಯೆ ಕಡಿತಗೊಳ್ಳುತ್ತಿದೆ. 2017-18ರಲ್ಲಿ 6,159 ಟ್ರಿಪ್‌ಗಳಲ್ಲಿ ಸೇವೆ ನೀಡಲಾಗುತ್ತಿತ್ತು. ಅದೇ ಈಗ ಆ ಸಂಖ್ಯೆ 5,639 ಟ್ರಿಪ್‌ಗಳಲ್ಲಿ ಸೇವೆ ನೀಡಲಾಗುತ್ತಿದೆ. ಅದರ ನಡುವೆ ಶಕ್ತಿ ಯೋಜನೆ ಜಾರಿಯಿಂದಾಗಿ ಕಳೆದ ಜೂನ್‌ನಿಂದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.