ಪೊಲೀಸರು ಆರೋಗ್ಯ ಕಾಪಾಡಿಕೊಳ್ಳಿ: ಪ್ರತಾಪ್‌ರೆಡ್ಡಿ

KannadaprabhaNewsNetwork |  
Published : May 01, 2024, 02:00 AM IST

ಸಾರಾಂಶ

ಪೊಲೀಸ್‌ ಇಲಾಖೆಯಲ್ಲಿ ಬಹಳ ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಿಬ್ಬಂದಿ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೊಲೀಸ್‌ ಇಲಾಖೆಯಲ್ಲಿ ಬಹಳ ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಿಬ್ಬಂದಿ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ಸ್ವಯಂ ನಿವೃತ್ತಿ ಪಡೆದ ಪ್ರತಾಪ್‌ ರೆಡ್ಡಿ ಅವರಿಗೆ ಕೋರಮಂಗಲದ ಕೆಎಸ್‌ಆರ್‌ಪಿ ಪರೆಡ್‌ ಮೈದಾನದಲ್ಲಿ ಮಂಗಳವಾರ ಬೀಳ್ಕೊಡುಗೆ ಕವಾಯತು ನಡೆಸಲಾಯಿತು.

ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಪ್ರತಾಪ್‌ ರೆಡ್ಡಿ, ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬಹಳ ಜಟಿಲವಾಗಿದೆ. ನಾನು ಇಲಾಖೆಗೆ ಸೇರಿದಾಗ ಇಷ್ಟೊಂದು ಕ್ಲಿಷ್ಟಕರವಾಗಿರಲಿಲ್ಲ. ಮುಂದೆ ಇನ್ನೂ ಕಷ್ಟವಾಗಬಹುದು. ಹೀಗಾಗಿ ಕರ್ತವ್ಯದ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಕೊಡಿ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.

ಕೆಎಸ್‌ಆರ್‌ಪಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಪೊಲೀಸ್‌ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಕೆಎಸ್‌ಆರ್‌ಪಿ ತುಕಡಿಗಳ ಜತೆ ಕೆಲಸ ಮಾಡಿರುವುದು ಬಹಳ ತೃಪ್ತಿ ತಂದಿದೆ. ಕೆಎಸ್‌ಆರ್‌ಪಿ ತುಕಡಿಗಳು ಇಲಾಖೆ ಹೆಮ್ಮೆ ಎಂದು ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಪೊಲೀಸ್‌ ಇಲಾಖೆಯಲ್ಲಿ ನನ್ನ 33 ವರ್ಷಗಳ ಅವಧಿಯಲ್ಲಿ ವಿವಿಧ ವಿಭಾಗ, ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಈ ಸೇವಾವಧಿಯಲ್ಲಿ ಅಧೀಕಾರಿಗಳು ಮತ್ತು ಸಿಬ್ಬಂದಿ ಬಹಳ ಪ್ರೀತಿ ತೋರಿಸಿದ್ದಾರೆ. ವೈಯಕ್ತಿಕವಾಗಿ ಗೌರವ ಸಿಕ್ಕಿದೆ ತೃಪ್ತಿ ವ್ಯಕ್ತಪಡಿಸಿದರು.

ಪುಟ್ಟಹಳ್ಳಿಯಲ್ಲಿ ಹುಟ್ಟಿದ ನನಗೆ ಪೋಷಕರು ಉತ್ತಮ ಶಿಕ್ಷಣ ಕೊಡಿಸಿದರು. ನಾನು ಯುಪಿಎಸ್ಸಿ ಪರೀಕ್ಷೆ ತೇರ್ಗಡೆಗೊಂಡು ಐಪಿಎಸ್‌ ಅಧಿಕಾರಿಯಾಗಿ ಪೊಲೀಸ್‌ ಇಲಾಖೆಗೆ ಪಾದಾರ್ಪಣೆ ಮಾಡಿ 33 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗುತ್ತಿದ್ದೇನೆ. ನನ್ನ ಈ ಸೇವಾ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ತೃಪ್ತಿ ಇದೆ ಎಂದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಅಲೋಕ್‌ ಮೋಹನ್‌, ಎಡಿಜಿಪಿ ಉಮೇಶ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತರಾದ ಬಿ.ದಯಾನಂದ ಸೇರಿದಂತೆ ಹಿರಿಯ-ಕಿರಿಯ ಅಧಿಕಾರಿಗಳು ಹಾಗೂ ಪ್ರತಾಪ್‌ ರೆಡ್ಡಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ