ನಿಮ್ಮ ಜತೆ ಚರ್ಚೆಗೆ ಬಿಎಂಟಿಸಿ ಎಂಡಿ ಸಾಕು: ರೆಡ್ಡಿ ಕಿಡಿ

KannadaprabhaNewsNetwork |  
Published : Jan 31, 2026, 04:00 AM IST
 ನಾಗಮೋಹನದಾಸ್‌ | Kannada Prabha

ಸಾರಾಂಶ

ನಗರ ಸಾರಿಗೆ ವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಬದಲು ಮುಖಾಮುಖಿ ಚರ್ಚೆಗೆ ಬರುವಂತೆ ಉದ್ಯಮಿ ಮೋಹನ್‌ದಾಸ್‌ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಸಾರಿಗೆ ವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಬದಲು ಮುಖಾಮುಖಿ ಚರ್ಚೆಗೆ ಬರುವಂತೆ ಉದ್ಯಮಿ ಮೋಹನ್‌ದಾಸ್‌ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ, ನಡೆಯಿಂದಾಗಿ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ವಿಫಲರಾಗಿದ್ದೀರಿ. ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆ ಸರಿಯಿಲ್ಲ. ಹೀಗಾಗಿ ಖಾಸಗಿ ವಲಯಕ್ಕೆ ಅವಕಾಶ ನೀಡಿ ಎಂದು ಉದ್ಯಮಿ ಮೋಹನ್‌ದಾಸ್‌ ಪೈ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಕುಟುಕಿದ್ದರು.

ಅದಕ್ಕೆ ಪ್ರತಿಯಾಗಿ ಎಕ್ಸ್‌ ಖಾತೆ ಮೂಲಕವೇ ಮೋಹನ್‌ದಾಸ್‌ ಪೈ ಅವರಿಗೆ ತಿರುಗೇಟು ನೀಡಿರುವ ರಾಮಲಿಂಗಾರೆಡ್ಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಯಾವುದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಸಿದ್ಧರಿದ್ದೇವೆ. ನಿಮ್ಮ ಜತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೇ ಸಾಕು. ದಯಮಾಡಿ ಎದುರಿಗೆ ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ. ನೀವು ಚರ್ಚೆಗೆ ಬರುತ್ತೀರಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ನೀಡುತ್ತಲೇ ಇರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಪಕ್ಷಪಾತವಷ್ಟೇ ಅಲ್ಲ:

ನಿಮ್ಮ ದೃಷ್ಟಿಕೋನ ಕೇವಲ ಪಕ್ಷಪಾತವಲ್ಲ. ಅದು ಮೂಲಭೂತವಾದ ಅಪನಂಬಿಕೆಯಾಗಿದೆ. ನೀವು ಸಾರ್ವಜನಿಕ ಸೇವೆಯನ್ನು ಬ್ಯಾಲೆನ್ಸ್‌ಶೀಟ್‌ ಆಧಾರದಲ್ಲಿ ನೋಡುತ್ತಿದ್ದೀರಿ. ಆದರೆ, ನಾನು ಸಾರ್ವಜನಿಕ ಸಾರಿಗೆಯನ್ನು ಸೇವೆಯಾಗಿ ನೋಡುತ್ತಿದ್ದೇನೆ ಮತ್ತು 1.50 ಕೋಟಿ ಜನರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರು 650 ಕೋಟಿಗೂ ಹೆಚ್ಚಿನ ಉಚಿತ ಪ್ರಯಾಣ ಮಾಡಿದ್ದಾರೆ. ಇದು ಕೇವಲ ಯೋಜನೆಯಲ್ಲ, ಭಾರತ ಇತಿಹಾಸದಲ್ಲಿ ಅತಿ ದೊಡ್ಡ ಚಲನಶೀಲತೆ ಮತ್ತು ಆರ್ಥಿಕ ಸಬಲೀಕರಣ. ಇನ್ನು, ಗ್ರಾಮೀಣ ವಿದ್ಯಾರ್ಥಿ ಮತ್ತು ಗ್ರಾಮೀಣ ನಾಗರಿಕರಿಗೆ ಉತ್ತಮ ಬಸ್‌ ಸೇವೆ ನೀಡಲು ಶೇ.30ರಷ್ಟು ಮಾರ್ಗಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶೇ.40ರಷ್ಟು ಮಾರ್ಗಗಳು ಮಾತ್ರ ಲಾಭದಲ್ಲಿದ್ದು, ಅವುಗಳಿಂದ ಇತರ ಮಾರ್ಗಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ರಾಜ್ಯದ ಶೇ. 98ರಷ್ಟು ಹಳ್ಳಿಗಳು ಬಸ್‌ ಸಂಪರ್ಕ ಹೊಂದಿವೆ. ಇದು ಸಾಮಾಜಿಕ ಸೇವೆಯ ಮಾದರಿಯಾಗಿದ್ದು, ನಿರ್ದೇಶಕ ಮಂಡಳಿಯಲ್ಲಿ ಕುಳಿತು ಮಾಡುವ ಕೆಲಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆಡೆ ದಕ್ಷ ಸೇವೆ ತೋರಿಸಿ:

ಕರ್ನಾಟಕ ಸರ್ಕಾರಿ ಸಾರಿಗೆಯಲ್ಲಿ 26,054 ಬಸ್‌ಗಳು ಸೇವೆ ನೀಡುತ್ತಿವೆ. ಬೆಂಗಳೂರಿನಲ್ಲೇ ಪ್ರತಿದಿನ 45 ಲಕ್ಷ ಪ್ರಯಾಣಿಕರಿಗೆ 7,108 ಬಸ್‌ಗಳು ಸಾರಿಗೆ ಸೇವೆ ಒದಗಿಸುತ್ತಿವೆ. ಅದರಲ್ಲಿ 1,686 ಎಲೆಕ್ಟ್ರಿಕ್ ಬಸ್‌ಗಳೂ ಸೇರಿವೆ. ನಾಲ್ಕೂ ನಿಗಮಗಳಿಂದ 13 ಲಕ್ಷ ಕಿ.ಮೀ. ಮತ್ತು 66 ಸಾವಿರ ಟ್ರಿಪ್‌ಗಳ ಮೂಲಕ ಸೇವೆ ನೀಡಲಾಗುತ್ತಿದೆ. ಇದು ದೇಶದಲ್ಲಿಯೇ ಹೆಚ್ಚು. ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ ಸೇರಿ ಕರ್ನಾಟಕದಲ್ಲಿ ನೀಡಲಾಗುತ್ತಿರುವ ದಕ್ಷತೆಯ ಸಾರಿಗೆ ಸೇವೆಯನ್ನು ಬಿಜೆಪಿ ಆಡಳಿತದ ಒಂದೇ ಒಂದು ನಗರ ಅಥವಾ ರಾಜ್ಯದಲ್ಲಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.

5,800ಕ್ಕೂ ಬಸ್‌ ಸೇರ್ಪಡೆ:

ಕಳೆದೆರಡು ವರ್ಷಗಳಲ್ಲಿ 5,800ಕ್ಕೂ ಹೆಚ್ಚಿನ ಹೊಸ ಬಸ್‌ಗಳನ್ನು ನಿಗಮಗಳಿಗೆ ಸೇರ್ಪಡೆ ಮಾಡಲಾಗಿದೆ. ಈ ವರ್ಷದ ಮಾರ್ಚ್‌ ವೇಳೆಗೆ ಇನ್ನೂ 2 ಸಾವಿರಕ್ಕೂ ಹೆಚ್ಚಿನ ಹೊಸ ಬಸ್‌ಗಳು ನಿಗಮಗಳಿಗೆ ಸೇರಲಿವೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಬಸ್‌ ಖರೀದಿ ಸ್ಥಗಿತಗೊಳಿಸಲಾಗಿತ್ತು, ನಿಗಮಗಳನ್ನು ಹಾಳಾಗಲು ಬಿಡಲಾಗಿತ್ತು. ಆಗ ಒಂದೇ ಒಂದು ಪ್ರಶ್ನೆಯನ್ನೂ ಏಕೆ ಕೇಳಲಿಲ್ಲ? ಜನಪರ ಸರ್ಕಾರ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ನಿಮ್ಮ ಕಾರ್ಪೋರೇಟ್‌ ಕಾಳಜಿ ಎಚ್ಚರಗೊಳ್ಳುವುದೇಕೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಖಾಸಗಿ ಅವರಿಗೆ ಬಸ್‌ ಸೇವೆ ನೀಡಲು ಅವಕಾಶ ನೀಡಿದರೆ ಲಾಭ ಬಾರದಿದ್ದರೆ ಸೇವೆ ಸ್ಥಗಿತಗೊಳಿಸುತ್ತಾರೆ. ಬಡವರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುತ್ತಾರೆ. ಜನರಿಗೆ ಇದರಿಂದ ನೆರವಾಗುವುದಿಲ್ಲ. ಸಾರ್ವಜನಿಕ ಸಾರಿಗೆ ಹಕ್ಕು, ಐಷಾರಾಮಿ ಸೇವೆಯಲ್ಲ ಎಂಬುದನ್ನು ತಿಳಿಯಿರಿ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಜಾಲತಾಣ ಬಳಕೆಗೆ ರಾಜ್ಯದಲ್ಲೂ ಮೂಗುದಾರ?
ಕೇಂದ್ರದ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ತೆರಿಗೆ ಗುಡುಗು