ಅಂಡರ್ ಪಾಸ್‌ವಾಲ್‌ನಲ್ಲಿ ಬೋಧಿ ವೃಕ್ಷದ ನೆಡುತೋಪು

KannadaprabhaNewsNetwork | Published : Apr 23, 2025 12:37 AM

ಸಾರಾಂಶ

ಚಿತ್ರದುರ್ಗದ ಹೊಸಪೇಟೆ ಕ್ರಾಸ್ ನಲ್ಲಿರುವ ಅಂಡರ್ ಪಾಸ್ ಗೋಡೆಗಳ ಮೇಲೆ ಬೆಳೆದಿರುವ ಸಾಲು ಅರಳೀ ಮರಗಳು

ಬಿರುಕು ಬಿಡುತ್ತಿದೆ ಗೋಡೆ । ನಿರ್ವಹಣೆ ಮರೆತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಚಳ್ಳಕೆರೆ ಟೋಲ್‌ಗೇಟ್ ನಿಂದ ಎಪಿಎಂಸಿ ವರೆಗಿನ 5 ಅಂಡರ್ ಪಾಸ್ ಗೋಡೆಗಳು ಬೋಧಿ ವೃಕ್ಷಗಳ ನೆಡು ತೋಪಿನಂತೆ ಕಂಗೊಳಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ವಹಣೆ ಲೋಪವನ್ನು ಜಗತ್ತಿಗೆ ಸಾರುತ್ತಿವೆ. ಅರಳಿ ಮರದ ಬೇರುಗಳಿಗೆ ಕಲ್ಲಿನ ಕೋಟೆಯನ್ನೇ ಭೇದಿಸುವಂತ ಶಕ್ತಿಯಿದೆ ಎಂಬ ಕನಿಷ್ಟ ವಿವೇಕ ಪ್ರಾಧಿಕಾರದ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಭವಿಷ್ಯದಲ್ಲಿ ಎದುರುಗಬಹುದಾದ ಆತಂಕಗಳ ಯಾರೂ ಗ್ರಹಿಸುತ್ತಿಲ್ಲ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಥುಷ್ಪಥ ಹೆದ್ದಾರಿ ಕನಸುಗಳು ಗರಿ ಗೆದರಿದಾಗ ಚಿತ್ರದುರ್ಗವೂ ತೆರೆದುಕೊಂಡಿತ್ತು. ಮಿಲ್ಟ್ರಿರೋಡ್ ಎನ್ನಿಸಿಕೊಂಡಿದ್ದ ಎರಡು ವಾಹನಗಳಷ್ಟೇ ಮುಖಾಮುಖಿಯಾಗಿ ಓಡಾಡಬಹುದಾಗಿದ್ದ ಪೂನಾ-ಬೆಂಗಳೂರು ರಸ್ತೆ ಚತುಷ್ಪಥವಾಗಿ ರೂಪಾಂತರಗೊಂಡಿತ್ತು. ನಗರ ಹಾದು ಹೋಗುವ ಹೆದ್ದಾರಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಹೆದ್ದಾರಿ ಪ್ರಾಧಿಕಾರ ಕಳೆದ 20 ವರ್ಷಗಳಿಂದ ನಗರದ ನಾಗರಿಕರಿಗೆ ಕಿರುಗಳುಗಳನ್ನೇ ನೀಡುತ್ತಾ ಬಂದಿತ್ತು.

ಇಂದಿಗೂ ಮಳೆ ಬಂದಲ್ಲಿ ಅಂಡರ್‌ಪಾಸ್‌ಗಳಿಂದ ಹೊರ ಹೋಗುವ ನೀರು ಬಡಾವಣೆಗಳಿಗೆ ನುಗ್ಗುತ್ತದೆ. ಇದೀಗ ಅಂಡರ್‌ಪಾಸ್ ಗೋಡೆಗಳ ಮೇಲೆ ಬೋಧಿ ವೃಕ್ಷಗಳ ನೆಡು ತೋಪು ಬೆಳೆಸುವುದರ ಮೂಲಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಅರಳಿ ಮರಗಳ ಬೇರು ಹೆದ್ದಾರಿ ಒಳಗಿನ ಭಾಗವನ್ನೆಲ್ಲ ಆವರಿಸಿಕೊಂಡಿದ್ದು ಭವಿಷ್ಯದಲ್ಲಿ ಗೋಡೆ ಕುಸಿಯಲು ಕಾರಣವಾಗುತ್ತದೆ.

ಹೆದ್ದಾರಿ ನಿರ್ವಹಣೆ ವಿಚಾರದಲ್ಲಿ ರಸ್ತೆ ಸುರಕ್ಷತಾ ಸಮಿತಿ ಪ್ರತಿ ಸಭೆಯಲ್ಲಿಯೂ ಜಿಲ್ಲಾಧಿಕಾರಿಗಳಿಂದ ಮೂದಲಿಕೆಗೆ ಒಳಗಾಗುತ್ತಿದ್ದ ಅಧಿಕಾರಿಗಳು ಎಂದಿಗೂ ತಮ್ಮ ನಿಲುವುಗಳ ಬದಲಾಯಿಸಿಕೊಂಡಿದ್ದಿಲ್ಲ. ಉದಾಸೀನತೆಯನ್ನೇ ಮುಂದುವರಿಸಿದ್ದರು. ಅವೈಜ್ಞಾನಿಕ ರಸ್ತೆಗಳು ಒಂದೆಡೆ ಅವಘಡಗಳಿಗೆ ಕಾರಣವಾಗುತ್ತಿದ್ದರೆ ಮತ್ತೊಂದೆಡೆ ಹೆದ್ದಾರಿ ಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹಕ್ಕೆ ಕಾರಣವಾಗಿತ್ತು. ಚಿತ್ರದುರ್ಗ ಪ್ರವೇಶ ಮಾಡುವ ಪ್ರವಾಸಿಗರಿಗೆ ಕಸ ಸ್ವಾಗತಿಸುತ್ತಿದೆ.

ವರ್ಷದ ಹಿಂದೆ ಹೊಸ ಬೈಪಾಸ್ ಆರಂಭಗೊಂಡಾದ ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್‌ಗಳ ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಎಂಜಿನಿಯರ್‌ಗಳು ಇದೀಗ ಹೆದ್ದಾರಿ ನಿರ್ವಹಣೆ ಉಸ್ತವಾರಿ ಹೊತ್ತಿದ್ದಾರೆ.

ಹೆದ್ದಾರಿಯನ್ನು ಹಸ್ತಾಂತರ ಮಾಡಿಕೊಳ್ಳುವಾಗ ಕನಿಷ್ಠ ಬೋಧಿ ವೃಕ್ಷಗಳ ತೆರವು ಮಾಡಿಕೊಡಿ ಎಂಬ ನಿಬಂಧನೆಗಳನ್ನಾದರೂ ವಿಧಿಸಬಹುದಿತ್ತು. ಈ ಬೋಧಿ ವೃಕ್ಷಗಳ ಕೀಳಲು ಬರುವುದಿಲ್ಲ. ಬೇರುಗಳಿಗೆ ಪಾದರಸ ಹರಿಸುವ ವೈಜ್ಞಾನಿಕ ನಿಯಮ ಪಾಲಿಸಬೇಕಾಗಿದೆ. ಅದಾವುದನ್ನೂ ಮಾಡದೆ ಬಿಳಿ ಹಾಳೆಗಳಿಗೆ ಸಹಿ ಮಾಡಿ ಹಸ್ತಾಂತರ ಪ್ರಕ್ರಿಯೆ ಮುಗಿಸಿಕೊಳ್ಳಲಾಗಿದೆ.

ಕಡ್ಲೆ ತಿಂದು ನೀರು ಕುಡಿದಷ್ಟೇ ಸಲೀಸಾಗಿ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ವಹಣೆ ಜವಾಬ್ದಾರಿಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕುತ್ತಿಗೆಗೆ ನೇತು ಹಾಕಿ ಗಾಯಬ್ ಆಗಿದ್ದಾರೆ. ಅಂಡರ್ ಪಾಸ್ ಗೋಡೆಗಳ ಮೇಲೆ ಅರಳೀ ಮರದ ನೆಡು ತೋಪು ವಿಸ್ತರಿಸುತ್ತಲೇ ಸಾಗಿದೆ. ಇನ್ನು ಸ್ವಲ್ಪ ದಿನ ಕಳೆದರೆ ಬೋಧಿ ವೃಕ್ಷಗಳಿಗೆ ಹೆಣ್ಣು ಮಕ್ಕಳು ಬಳೆ ನೇತು ಹಾಕಿ, ಕುಂಕುಮ ಹಚ್ಚಿ ಪೂಜೆಗೆ ಶುರು ಮಾಡಿದರೆ ಅಚ್ಚರಿ ಏನಲ್ಲ.

Share this article