ಮೀನುಗಾರಿಕಾ ಬೋಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

KannadaprabhaNewsNetwork |  
Published : Apr 11, 2025, 12:32 AM IST
ಮೃತ ದೇಹ ದೊರೆತ ಬೋಟ್  | Kannada Prabha

ಸಾರಾಂಶ

ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬೋಟ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಡದಿಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿ, ಸೂಕ್ತ ತನಿಖೆ ನಡೆಸಿ, ಪರಿಹಾರ ನೀಡುವಂತೆ ಆಗ್ರಹಿಸಿದರು.

ಗೋಕರ್ಣ: ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಬೋಟ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಇಲ್ಲಿನ ಬೇಲೆಹಿತ್ತಲ ನಿವಾಸಿ ಅನಂತ ಬೀರಪ್ಪ ಅಂಬಿಗ (೫೨) ಮೃತಪಟ್ಟ ವ್ಯಕ್ತಿ.

ಏ. 6ರಂದು ಅನಂತ ಅಂಬಿಗ ಅವರು ಮೀನುಗಾರಿಕೆಗಾಗಿ ಗೋವಾಕ್ಕೆ ತೆರಳಿದ್ದಾರೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಬೋಟ್‌ನ್ನು ಹೊನ್ನಾವರಕ್ಕೆ ತಂದಿದ್ದರು. ಆದರೆ ಇದು ಗೋಕರ್ಣ ವ್ಯಾಪ್ತಿಗೆ ಬರುತ್ತದೆ ಎಂದಿದ್ದು, ನಂತರ ತದಡಿ ಬಂದರಿಗೆ ಬೋಟ್ ತಂದಿದ್ದಾರೆ. ಪೊಲೀಸರಿಗೆ ಮಾಹಿತಿ ತಲುಪಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ದೂರು ದಾಖಲು: ಈ ಕುರಿತು ಮೃತರ ಸಹೋದರ ವಸಂತ ಅಂಬಿಗ ದೂರು ದಾಖಲಿಸಿದ್ದು, ಈ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ. ಪಿಐ ಶ್ರೀಧರ ಎಸ್.ಆರ್. ಮಾರ್ಗದರ್ಶನದಲ್ಲಿ ಪಿಎಸ್‌ಐ ಖಾದರ್ ಬಾಷಾ ತನಿಖೆ ಕೈಗೊಂಡಿದ್ದಾರೆ.

ಶವ ತೆಗೆದುಕೊಂಡು ಹೋಗಲು ಒಪ್ಪದ ಮೀನುಗಾರರು: ಮೃತರ ಕುಟುಂಬಸ್ಥರು ಹಾಗೂ ಮೀನುಗಾರರ ಮುಖಂಡರಾದ ಉಮಾಕಾಂತ ಹೊಸ್ಕಟ್ಟಾ, ತದಡಿ ಮೀನಿಗಾರರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಮೀನುಗಾರರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಬೋಟ್ ಮಾಲೀಕರು ಬಂದು ಸಾವಿಗೆ ಕಾರಣ ಹಾಗೂ ಸೂಕ್ತ ಪರಿಹಾರ ನೀಡುವ ವರೆಗೂ ಮೃತ ದೇಹ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮುಂಜಾನೆಯಿಂದ ಸಂಜೆ ವರೆಗೂ ಪ್ರತಿಭಟನೆ ಮುಂದುವರಿದಿತ್ತು. ಆನಂತರ ಜೆಡಿಎಸ್ ಪ್ರಮುಖ ಸೂರಜ್ ನಾಯಕ ಸೋನಿ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ವೇ. ರಾಜಗೋಪಾಲ ಅಡಿಗುರೂಜಿ, ಗ್ರಾಪಂ ಮಾಜಿ ಅಧ್ಯಕ್ಷ ಮೋಹನ ನಾಯಕ, ಮಂಜುನಾಥ ಜನ್ನು ಮತ್ತಿತರ ಮುಖಂಡರು ಮೀನುಗಾರರ ಬೆಂಬಲಕ್ಕೆ ನಿಂತರು. ಗೋವಾ ಮೂಲದ ಬೋಟ್ ಮಾಲೀಕರ ವ್ಯವಸ್ಥಾಪಕರು ಆರು ಗಂಟೆಯ ಆನಂತರ ಬಂದರು. ಪೊಲೀಸ್ ಠಾಣೆಯಲ್ಲೇ ಮಾತುಕತೆಗೆ ಬರುವಂತೆ ಮೀನುಗಾರರಿಗೆ ಹೇಳಿದರು. ಆದರೆ ಇದಕ್ಕೆ ಒಪ್ಪದ ಮೀನುಗಾರರು ನಾವು ಮುಂಜಾನೆಯಿಂದ ಇಲ್ಲೇ ಕಾಯುತ್ತಿದ್ದು, ನಮ್ಮ ಮುಂದೆಯೇ ಮಾತನಾಡಲಿ ಎಂದು ಪಟ್ಟು ಹಿಡಿದರು. ಕೆಲಕಾಲ ತೀವ್ರ ಗೊಂದಲದ ವಾತಾವರಣ ಉಂಟಾಯಿತು. ಅಂತೂ ಮೀನುಗಾರರ ಪ್ರಮುಖರ ಮಾತ್ರ ಪಾಲ್ಗೊಂಡು ಠಾಣೆಯಲ್ಲಿ ಮಾತುಕತೆ ನಡೆಸಲು ಒಪ್ಪಿದ್ದು, ಠಾಣೆಯಲ್ಲಿ ಪಿ.ಐ. ಶ್ರೀಧರ ನೇತೃತ್ವದಲ್ಲಿ ಒಂದು ಹಂತದ ಮಾತುಕತೆ ಮುಗಿಯಿತು. ಆದರೂ ಅಂತಿಮಗೊಂಡಿಲ್ಲ.

ಗೋವಾದಲ್ಲಿರುವ ಈ ಬೋಟ್ ಮಾಲೀಕ ಈ ಹಿಂದೆ ಅನೇಕ ಮೀನುಗಾರರನ್ನು ಕೆಲಸಕ್ಕೆ ಕರೆದುಕೊಂಡು ಆನಂತರ ಹಣ ನೀಡದೆ ಕಳುಹಿಸಿದ್ದಾನೆ ಎಂದು ಸ್ಥಳದಲ್ಲಿದ್ದ ಮೀನುಗಾರರು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!