ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ದಾಮೋದರ ನಾಯರ್ ಅವರ ದ್ವಿತೀಯ ಪುತ್ರ ಸಂಪತ್ ಅಲಿಯಾಸ್ ಶಂಭು (45) ಕೊಲೆಯಾದವರು. ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ರಕ್ತಸಿಕ್ತವಾದ ಕಾರು ಮೇ 10ರ ಶನಿವಾರ ಕಂಡು ಬಂದಿತ್ತು.
ಶನಿವಾರ ಬೆಳಗ್ಗೆ ಕಾರ್ಮಿಕರನ್ನು ಕರೆತಂದ ಕಾರಿನ ಚಾಲಕನೋರ್ವ ಅಪರಿಚಿತ ರಕ್ತಸಿಕ್ತ ಕಾರನ್ನು ಗಮನಿಸಿ, ಯಸಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಯಸಳೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ತನಿಖೆ ಮಾಡಿದ ನಂತರ ಕಾರು ಮಾಲೀಕ ಕುಶಾಲನಗರದ ಜಾನ್ ಎಂಬುದು ತಿಳಿದಿದೆ. ಈ ಕುರಿತು ಕಾರಿನ ಮಾಲೀಕ ಜಾನ್ ಎಂಬುವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕುಶಾಲನಗರ, ಸೋಮವಾರಪೇಟೆ, ಯಸಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.ಸೋಮವಾರಪೇಟೆಯಿಂದ ಯಸಳೂರು, ಸಕಲೇಶಪುರ ಮಾರ್ಗದ ಎಲ್ಲಾ ಸಿ.ಸಿ. ಕ್ಯಾಮೆರಾಗಳ ಫೂಟೇಜ್‌ಗಳನ್ನು ಪರಿಶೀಲಿಸಿದ ಸಂದರ್ಭ ಸಂಪತ್ ತೆರಳಿದ ಕಾರಿನ ಜೊತೆಯಲ್ಲೇ ಮತ್ತೆರಡು ಕಾರುಗಳು ತೆರಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ. ಇನ್ನು ಹಲವರ ವಿಚಾರಣೆ ನಡೆಸಬೇಕಿದ್ದು, ಸದ್ಯಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಸ್ಪಿ ರಾಮರಾಜನ್ ಹೇಳಿದ್ದಾರೆ.
ಕೊಲೆಯ ನಂತರ ಆರೋಪಿಗಳು ನಾಪತ್ತೆಯಾಗಿದ್ದು, ಐದು ದಿವಸಗಳಾದರೂ ಪೊಲೀಸರಿಗೆ ಮಾಹಿತಿ ದೊರೆತಿಲ್ಲ. ಪ್ರಕರಣದ ಸಂಬಂಧ ಭಾನುವಾರದಿಂದ ಹಲವರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಎಲ್ಲಾ ಆಯಾಮಾಗಳಿಂದ ತನಿಖೆ ಮುಂದುವರೆಸಿದ್ದಾರೆ. ಈರ್ವರು ವಿಚಾರಣೆಗೆ ಸಿಗದೆ ತಲೆಮರೆಸಿಕೊಂಡಿದ್ದು, ಈವರೆಗೂ ಪೊಲೀಸರ ತನಿಖೆಗೆ ಸಿಗುತ್ತಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಗುಮಾನಿಗೆ ಎಡೆಮಾಡಿಕೊಟ್ಟಿದೆ.
ಐದು ದಿನಗಳ ನಂತರ ಸಂಪತ್ ಶವ ಪತ್ತೆ, ಆರೋಪಿಗಳು ನಾಪತ್ತೆ!
ಪ್ರಕರಣದ ಕುರಿತು ತಾಲೂಕು ಕಚೇರಿಯ ಮಹಿಳಾ ಅಧಿಕಾರಿಯೋರ್ವರು ಸೇರಿದಂತೆ ಈರ್ವರು ಮಹಿಳೆಯರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು, ಅವರಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ, ಸೋಮವಾರಪೇಟೆ ಹಾಗೂ ಯಸಳೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳ ಹುಡುಕಾಟಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಮೃತ ಸಂಪತ್ ಕೆಲವು ವ್ಯಕ್ತಿಗಳ ರಹಸ್ಯ ವಿಡಿಯೋಗಳ ಪೆನ್ ಡ್ರೈವ್ ಇಟ್ಟುಕೊಂಡಿದ್ದು, ಅದರಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದ ಕುರಿತು ಕೊಲೆ ಆರೋಪಿಗಳು ಹಾಗೂ ಮೃತ ಸಂಪತ್ ನಡುವೆ ಕಳೆದ ಒಂದುವರೆ ತಿಂಗಳಿನಿಂದ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಸಂಪತ್ ಗೆ ಸೇರಿದ ಕಾರಿನಲ್ಲಿ ಪೆನ್ ಡ್ರೈವ್ ಪತ್ತೆಯಾಗಿದ್ದು, ಪೊಲೀಸರು ಪೆನ್ ಡ್ರೈವ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸಂಪತ್‌ನ ಆಪ್ತ ಸ್ನೇಹಿತೆಯರ ವಿಚಾರವಾಗಿ ಆತನ ಒಂದು ಕಾಲದ ಆಪ್ತ ಮಿತ್ರರ ನಡುವೆ ಕಳೆದ ಒಂದುವರೆ ತಿಂಗಳಿನಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ಕೊಲೆಗೆ ಸಹಕರಿಸಿರುವವರ ಕುರಿತು ಹೆಚ್ಚಿನ ಮಾಹಿತಿಗಳು ಪೊಲೀಸರಿಗೆ ಕೊಲೆ ಆರೋಪಿಗಳು ಪತ್ತೆಯಾದ ನಂತರವಷ್ಟೇ ಲಭಿಸಬೇಕಾಗಿದೆ.