ಕಾಂಗ್ರೆಸ್‌ನಿಂದ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚಿಕೆ । ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿಕೆ
ಕಾಂಗ್ರೆಸ್ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ಕೊಡುವ ಘೋಷಣೆ ಮಾಡಿದೆ. ರಾಷ್ಟ್ರದಲ್ಲಿ 35 ಕೋಟಿ ಕುಟುಂಬಗಳಿವೆ. ವರ್ಷಕ್ಕೆ ₹35 ಲಕ್ಷ ಕೋಟಿ ಬೇಕು. ಮಹಿಳೆಯರಿಗೆ ₹1 ಲಕ್ಷ ಕೊಡುವುದು ಅಸಾಧ್ಯ. ಕಾಂಗ್ರೆಸ್ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಆರೋಪಿಸಿದರು.
ತಾಲೂಕಿನ ಕದ್ರಳ್ಳಿ, ಕುದರಿಮೋತಿ, ನೆಲಜೇರಿ ಗ್ರಾಮದಲ್ಲಿ ಜರುಗಿದ ಬಿಜೆಪಿ ಲೋಕಸಭಾ ಬಹಿರಂಗ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಮೂರು ಪಟ್ಟು ವೇಗ ಪಡೆದಿವೆ. ಮೋದಿ ರಾಷ್ಟ್ರದಲ್ಲಿ ಭಯೋತ್ಪಾದನೆ ಹೋಗಲಾಡಿಸಿದರು. ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಮೋದಿ ಎಂದಿಗೂ ಸುಳ್ಳು ಹೇಳಿಲ್ಲ. ಅಭಿವೃದ್ಧಿ ಕೆಲಸ ಮಾಡಿ ಮಾದರಿ ಆಗಿದ್ದಾರೆ ಎಂದರು.ಕಾಂಗ್ರೆಸ್ ಚುನಾವಣಾ ಪ್ರಯುಕ್ತ ಬೊಗಸ್ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಗಳಿಸಿದ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು ನೀಡುವುದು ಸರಿಯೇ. ಇಂತಹ ಪಾಲುದಾರಿಕೆ ಗ್ಯಾರಂಟಿ ಜನರಿಗೆ ಅನಾನುಕೂಲ ಆಗುತ್ತದೆ.
ಡಿಕೆಶಿ ಸಿಎಂ ಆಗ್ತಿನಿ ಅಂತಾರೆ. ಅತ್ತ ಸಿಎಂ ಸಿದ್ದರಾಮಯ್ಯ ಮತ ಕಾಂಗ್ರೆಸ್‌ಗೆ ಬರಲಿಲ್ಲವೆಂದರೆ ನನ್ನ ಅಧಿಕಾರ ಹೋಗುತ್ತದೆ ಅನ್ನುತ್ತಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಹಲುಬುತ್ತಿದೆ.
ಮುಖಂಡ ಸುಧಾಕರ್ ದೇಸಾಯಿ ಮಾತನಾಡಿ, ದೇಶಕ್ಕೆ ಸಮರ್ಥ ವ್ಯಕ್ತಿ ಆಯ್ಕೆ ಮಾಡುವ ಕೆಲಸ ಆಗಬೇಕಾಗಿದೆ. ದೇಶದ ಸಮಗ್ರ ಸುರಕ್ಷತೆಗೆ ಮೋದಿ ಕೊಡುಗೆ ಅಪಾರ ಎಂದರು.
ಮುಖಂಡರಾದ ವಕ್ತಾರ ವೀರಣ್ಣ ಹುಬ್ಬಳ್ಳಿ, ಸಿ.ಎಚ್. ಪೋಲಿಸ್ ಪಾಟೀಲ್, ರತನ್ ದೇಸಾಯಿ, ಗುಂಗಾಡಿ ಶರಣಪ್ಪ, ವಿಶ್ವನಾಥ ಮರಿಬಸಪ್ಪನವರ್, ಎಂ.ಬಿ. ಅಳವಂಡಿ, ಅಯ್ಯನಗೌಡ ಕೆಂಚಮ್ಮನವರ್, ದ್ಯಾಮಣ್ಣ ಉಚ್ಚಲಕುಂಟಾ, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ ತಿಮ್ಮಾಪೂರ, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದು ಮಣ್ಣಿನವರ್, ಸೋಮನಗೌಡ, ಈರಪ್ಪ ರ್‍ಯಾವಣಕಿ, ಅಮರೇಶ ಹುಬ್ಬಳ್ಳಿ, ಗೌರಾ ಬಸವರಾಜ, ಶಿವಪ್ಪ ವಾದಿ ಇತರರಿದ್ದರು.