ಕಾಮಿಡಿ ತುಳು ಸಿನಿಮಾ ಮಾಡುವಾಸೆ: ಬಾಲಿವುಡ್ ನಟ ಸುನಿಲ್ ಶೆಟ್ಟಿ

KannadaprabhaNewsNetwork |  
Published : Jan 17, 2025, 12:47 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಾಲಿವುಡ್ ನಟ ಸುನಿಲ್ ಶೆಟ್ಟಿ | Kannada Prabha

ಸಾರಾಂಶ

ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳ ಸಿನಿಮಾಗಳು ಇಂಟೆಲಿಜೆಂಟ್ ಆಗಿ ಜಗತ್ತಿನ ಗಮನ ಸೆಳೆದಿವೆ. ಇದು ಬಜೆಟ್‌ನಿಂದ ಸಾಧ್ಯವಾದದ್ದಲ್ಲ. ಬದಲಾಗಿ ಚಿತ್ರದ ವಿಷಯದಿಂದ ಸಾಧ್ಯವಾದದ್ದು. ತುಳು ಭಾಷೆಗೂ ಇಂತಹ ಸಾಮರ್ಥ್ಯ ಇದೆ. ಆದರೆ ತುಳುನಾಡಿನ ಸಮಸ್ಯೆ ಎಂದರೆ, ಇಲ್ಲಿ ಕಲಿತು ಬೇರೆ ಕಡೆ ಕೆಲಸಕ್ಕೆ ತೆರಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಚಿತ್ರದ ಸಬ್ಜೆಕ್ಟ್ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಾನು ಮೂಲ್ಕಿಯ ಬಪ್ಪನಾಡಿನಲ್ಲಿ ಹುಟ್ಟಿದವನು. ಇಲ್ಲಿನ ಸಂಸ್ಕೃತಿ, ಜಾಗ ಅದ್ಭುತ. ನಾನು ತುಳುವ ಎನ್ನಲು ಅತೀವ ಹೆಮ್ಮೆ ಇದೆ. ಮುಂದೊಂದು ದಿನ ಪೂರ್ಣ ಪ್ರಮಾಣದಲ್ಲಿ ಕಾಮಿಡಿ ತುಳು ಸಿನಿಮಾ ಮಾಡುವಾಸೆ ಇದೆ ಎಂದು ಹೆಸರಾಂತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಸಿನಿಮಾದಲ್ಲಿ ಅಭಿನಯಿಸಲು ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ತುಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದೇನೆ. ತುಳು ಚಿತ್ರರಂಗದವರು ನಿರಂತರವಾಗಿ ಕೇಳುತ್ತಾ ಬಂದಿದ್ದರೂ ಸಮಯಾವಕಾಶ ಸಿಕ್ಕಿರಲಿಲ್ಲ. ಈಗ ಜೈ ಚಿತ್ರದಲ್ಲಿ ಮಾಡುತ್ತಿರುವುದು ಅತಿಥಿ ಪಾತ್ರ ಮಾತ್ರ.‌ ಇದನ್ನು ಮೀರಿ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಚಿತ್ರ ಮಾಡುವ ಆಸೆ ಇದೆ. ಕಾಮಿಡಿ ಎನ್ನುವುದು ಯೂನಿವರ್ಸಲ್ ಭಾಷೆ, ಹಾಗಾಗಿ ಕಾಮಿಡಿ ಆಯ್ದುಕೊಂಡಿರುವುದಾಗಿ ಹೇಳಿದರು.

ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳ ಸಿನಿಮಾಗಳು ಇಂಟೆಲಿಜೆಂಟ್ ಆಗಿ ಜಗತ್ತಿನ ಗಮನ ಸೆಳೆದಿವೆ. ಇದು ಬಜೆಟ್‌ನಿಂದ ಸಾಧ್ಯವಾದದ್ದಲ್ಲ. ಬದಲಾಗಿ ಚಿತ್ರದ ವಿಷಯದಿಂದ ಸಾಧ್ಯವಾದದ್ದು. ತುಳು ಭಾಷೆಗೂ ಇಂತಹ ಸಾಮರ್ಥ್ಯ ಇದೆ. ಆದರೆ ತುಳುನಾಡಿನ ಸಮಸ್ಯೆ ಎಂದರೆ, ಇಲ್ಲಿ ಕಲಿತು ಬೇರೆ ಕಡೆ ಕೆಲಸಕ್ಕೆ ತೆರಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಚಿತ್ರದ ಸಬ್ಜೆಕ್ಟ್ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದರು.ಇನ್ನೂ ಮೂರು ದಿನ ಶೂಟಿಂಗ್‌: ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಜೈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ಸುನಿಲ್ ಶೆಟ್ಟಿ, ಇನ್ನೂ ಮೂರು ದಿನ ಇಲ್ಲೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ನನ್ನ ಸಿನಿಮಾದಲ್ಲಿ ನಟಿಸಲು ಅವರು ಒಪ್ಪಿರೋದು ನನ್ನ ಭಾಗ್ಯ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು.ಸೈಫ್ ಶೀಘ್ರ ಗುಣಮುಖರಾಗಲಿ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚೂರಿಯಿಂದ ಇರಿದ ಪ್ರಕರಣ ನಡೆದಿರೋದು ಅತ್ಯಂತ ಬೇಸರ ವಿಷಯ. ಶೂಟಿಂಗ್‌ನಲ್ಲಿ ಇದ್ದುದರಿಂದ ತಡವಾಗಿ ವಿಚಾರ ಗೊತ್ತಾಯಿತು. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುನಿಲ್ ಶೆಟ್ಟಿ ಹೇಳಿದರು. ಕಲಾವಿದರಿಗೆ ಭದ್ರತೆಯೇ ಒಂದು ದೊಡ್ಡ ಸಮಸ್ಯೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ