ಹಾವೇರಿ/ಹಾನಗಲ್ಲ: ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠ ಸೇರಿ ಕಾರು, ಬಸ್, ಶಾಲೆಗಳು ಸೇರಿ ವಿವಿಧೆಡೆ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದರಿಂದ ಶುಕ್ರವಾರ ಮಧ್ಯಾಹ್ನ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ತುರ್ತು ಸಹಾಯವಾಣಿ 112ಗೆ ಕರೆ ಬಂದ ತಕ್ಷಣವೇ ಎಚ್ಚೆತ್ತ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಜತೆ ತೆರಳಿ ತಪಾಸಣೆ ನಡೆಸಿದ್ದಾರೆ.ಹರೀಶ ಎಂಬಾತ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಈತ ಡಿಆರ್‌ಡಿಒದಲ್ಲಿ ಡ್ರೈವರ್ ಆಗಿದ್ದ. ಆತನಿಗೆ ಮಾನಸಿಕ ಅಸ್ವಸ್ಥತೆ ಇದೆ ಎನ್ನಲಾಗಿದೆ. ಮುಂಜಾಗ್ರತವಾಗಿ ಬಾಂಬ್ ಪತ್ತೆಗಾಗಿ ಎಎಸ್‌ಪಿ ಮತ್ತು ಸೊಕೊ ಟೀಂ, ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುರುಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಎಸ್‌ಪಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.
ಹುಸಿ ಬಾಂಬ್ ಕರೆ ಬಗ್ಗೆ ಹಾನಗಲ್ಲ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕರೆ ಮಾಡಿರುವ ನಂಬರ್ ಪತ್ತೆ ಮಾಡಿ ಆರೋಪಿ ಹರೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಕೂಡಿದವನೆಂದು ತಿಳಿದುಬಂದಿದ್ದು, ತನಿಖೆ ಮುಂದುವರಿದೆ ಎಂದಿದ್ದಾರೆ.ಶ್ರೀಗಳ ಅನಿರೀಕ್ಷಿತ ಭೇಟಿ: ಶ್ರೀಮಠದ ಪೀಠಾಧಿಪತಿ, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳೂ ಆಗಿರುವ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರು ಘಟನೆ ನಡೆದ ಸ್ಥಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಮಠಕ್ಕೆ ಬರುತ್ತಿದ್ದಂತೆ ಬಾಂಬ್ ಸುದ್ದಿ ತಿಳಿದಿದೆ. ನಂತರ ಒಂದು ಗಂಟೆ ನಾವು ಅಲ್ಲೆ ಇದ್ದೆವು. ಬಾಂಬ್ ಸುದ್ದಿ ಹುಸಿ ಎಂದು ತಿಳಿಯಿತು. ಆದರೆ ಮಠದ ವಿಷಯಕ್ಕೆ ಹಲವು ವಾದ ವಿವಾದಗಳಿರುವ ಕಾರಣಕ್ಕೆ ಇದು ಭಯವನ್ನೂ ತಂದಿದೆ. ಇದು ವಿಷಾದಕರ ಘಟನೆ ಎಂದು ತಿಳಿಸಿದ್ದಾರೆ.