ಹೊಸಪೇಟೆ: ಕಾಂಗ್ರೆಸ್ ಪ್ರಚಾರ ಸಮಿತಿಗಳನ್ನು ಕೇವಲ ಚುನಾವಣೆಗೆ ಸೀಮಿತಗೊಳಿಸದೆ, ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯಾದ್ಯಂತ ಜಿಲ್ಲಾ, ವಿಭಾಗ ಮಟ್ಟದಲ್ಲಿ ಪ್ರಚಾರ ಸಮಿತಿ ಸಭೆ ನಡೆಸುವ ಮೂಲಕ ಪಕ್ಷ ಸಂಘಟಿಸಲು ಎಐಸಿಸಿ ಅನುಮೋದನೆ ನೀಡಿದೆ ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ: ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಖಾತೆಗಳಿಗೆ ಜಮಾ ಆದ ಹಣ ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿದೆ. ಇದರಿಂದ ಮಹಿಳೆಯ ತಲಾ ಆದಾಯ ಅಧಿಕವಾಗಿದೆ. ತಲಾ ಆದಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ನಂ. ವನ್ ಸ್ಥಾನದಲ್ಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿರೋಧ ಪಕ್ಷಗಳ ಆರೋಪದಂತೆ ಸರ್ಕಾರ ದಿವಾಳಿಯಾಗಿದ್ದರೆ ಇದೆಲ್ಲಾ ಮಾಡಲು ಆಗುತ್ತಿತ್ತಾ ಎಂದು ಪ್ರಶ್ನಿಸಿದರು.
ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ: ಸೌಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಎಸ್‌ಐಟಿಗೆ ವಹಿಸಲಾಗಿದೆ. ಎಸ್‌ಐಟಿ ತನಿಖೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಈಗ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಧರ್ಮಸ್ಥಳ ಪಾದಯಾತ್ರೆ ನಾಟಕ ಮಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಯಶೋಧರ ಮೂರ್ತಿ, ಜಿಲ್ಲಾಧ್ಯಕ್ಷ ಎಚ್.ಎನ್. ಎಫ್. ಮಹಮದ್ ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ ನಾಗರಾಜ, ವಿನಾಯಕ ಶೆಟ್ಟರ್, ಡಾ. ಸಂತೋಷ್, ಆನಂದ್ ಪಿ. ಬಾಬು ಮತ್ತಿತರರಿದ್ದರು.