ಕಾರವಾರ: ಜಿಲ್ಲೆಯಲ್ಲಿನ ಪ್ರತಿಯೊಬ್ಬರಿಗೂ ಆರೋಗ್ಯ ಇಲಾಖೆ ಮೂಲಕ ಆಯಷ್ಮಾನ್ ಆರೋಗ್ಯ ಸೇವೆಗಳು ಮತ್ತು ಹಿರಿಯ ನಾಗರಿಕರಿಗೆ ವಯೋ ವಂದನಾ ಯೋಜನೆಯ ಪ್ರಯೋಜನವನ್ನು ತಲುಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗರಿ ಸೂಚಿಸಿದರು.
ಆಯಷ್ಮಾನ್ ಹಾಗೂ ವಯೋ ವಂದನಾ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದ ಬಗ್ಗೆ ತಾಂತ್ರಿಕ ಕಾರಣಗಳು ನೆಪವಾಗಬಾರದು. ಜಿಲ್ಲೆಯಲ್ಲಿ ಕ್ಷಯ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಬಾಕಿ ಇರುವ 92 ಗ್ರಾಮಗಳನ್ನು ಶೀಘ್ರದಲ್ಲಿ ಕ್ಷಯ ಮುಕ್ತ ಮಾಡುವ ಕಾರ್ಯವನ್ನು ಮುಗಿಸಬೇಕು, ನಿಕ್ಷಯ ಪೋಷಣ ಯೋಜನೆಯ ಪ್ರಗತಿಗೆ ಜಿಲ್ಲೆಯಲ್ಲಿನ ವಿವಿಧ ಸಂಸ್ಥೆಗಳ ಸಿ.ಎಸ್.ಆರ್ ಫಂಡ್ ನ ನೆರವು ಬಳಸಿಕೊಳ್ಳಿ. ಜಿಲ್ಲೆಯಲ್ಲಿನ ಎಲ್ಲ ಜನೌಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು, ಆರೋಗ್ಯ ಸೇವೆಗಳಿಗಾಗಿ ಕೇಂದ್ರ ಸರ್ಕಾರದಿಂದ ಅಧಿಕ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸುವಂತೆ ಮತ್ತು ಕುಮಟಾದಲ್ಲಿ ಟ್ರಾಮಾ ಸೆಂಟರ್ ನ್ನು ಬೇಗ ಆರಂಭಿಸುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಟವರ್‌ಗಳ ನಿರ್ಮಾಣ ಮತ್ತು ಸಂಪರ್ಕ ಕಾರ್ಯದ ಕುರಿತಂತೆ ಅರಣ್ಯ ಇಲಾಖೆಯ ಮೂಲಕ ಬಿ.ಎಸ್.ಎನ್.ಎಲ್ ಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಅವರು, ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು.
ಮೀನುಗಾರಿಕೆಯ ಇಲಾಖೆ ಮೂಲಕ ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದರ ಮೂಲಕ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು, ಕೇಂದ್ರ ಸರ್ಕಾರದಿಂದ ಜಿಲ್ಲೆಯ 8 ಬಂದರುಗಳನ್ನು ಮೇಲ್ದರ್ಜೆಗೇರಿಸಲು ₹50 ಕೋಟಿ ಯೋಜನೆ ಇದ್ದು, ಕೂಡಲೇ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಕೇಂದ್ರದಲ್ಲಿ ಶೀಘ್ರದಲ್ಲಿ ಅನುಮತಿ ನೀಡಲಾಗುವುದು, ಇನ್ಸೂಲೇಟೆಡ್ ವಾಹನಗಳ ಘಟಕ ವೆಚ್ಚ ಹೆಚ್ಚಳ ಮಾಡುವ ಕುರಿತಂತೆ ಕೇಂದ್ರದಿಂದ ಅನುಮತಿ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಎಲೆ ಚುಕ್ಕಿ ರೋಗ ತಡೆಗೆ ಕ್ರಮ ಕೈಗೊಳ್ಳಿ. ಜಿಲ್ಲೆಯ ವಿಶೇಷ ಬೆಳೆಗಳು ಮತ್ತು ಬೆಳೆಗಾರರ ಬಗ್ಗೆ ಮಾಹಿತಿ ಇಟ್ಟುಕೊಳ್ಳಿ, ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಲ್ಲಿನ ಸ್ಥಳಿಯ ಮತ್ತು ಸ್ವದೇಶೀ ಉತ್ಪನ್ನಗಳ ಬಳಕೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಎಂದ ಅವರು ಕೃಷಿ ,ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.
ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ವಿಳಂಬ ಮತ್ತು ಕಳಪೆ ಗುಣಮಟ್ಟದ ಕುರಿತು ದೂರುಗಳು ಬರುತ್ತಿವೆ. ಈ ಬಗ್ಗೆ ಪರಿಶೀಲಿಸುವಂತೆ ಹಾಗೂ ಗುತ್ತಿಗೆದಾರರಿಗೆ ಕಾಮಗಾರಿ ಮುಕ್ತಾಯ ಸಮಯ ನಿಗದಿಗೊಳಿಸಿ ಅವರ ವಿರುದ್ಧ ಬಿಗು ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಇನ್ನು 800 ಹಳ್ಳಿಗಳಿಗೆ ಜಲ ಜೀವನ್ ಯೋಜನೆಯ ಸಂಪರ್ಕ ನೀಡಲು ಬಾಕಿಯಿದೆ. ಇದನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.