ಆತಂಕಪಡುವ ಅಗತ್ಯವಿಲ್ಲ: ಎಸ್ಪಿ ದೀಪನ್ ಎಂ.ಎನ್
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಆಯಕಟ್ಟಿನ ಪ್ರದೇಶಗಳಾದ ಭಟ್ಕಳ ಹಾಗೂ ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆಯು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಬೆಳಗ್ಗೆ ಸುಮಾರು 7.20ರ ವೇಳೆಗೆ ''ಗಯನಾ ರಮೇಶ್'' ಎಂಬುವವರ ಹೆಸರಿನ ಮೇಲ್ ಖಾತೆಯಿಂದ ಭಟ್ಕಳ ತಹಶೀಲ್ದಾರರ ಕಚೇರಿಗೆ ಬಂದಿರುವ ಇಮೇಲ್ ಸಂದೇಶದಲ್ಲಿ ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಎಚ್ಚರಿಸಲಾಗಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು ಎಂದು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.ಬಾಂಬ್ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ, ಕಾರವಾರ ತಹಶೀಲ್ದಾರ್ ಕಚೇರಿ ಮೇಲ್ ಐಡಿಗೆ ಇಮೇಲ್ ಬಂದಿದ್ದು, ತಹಶೀಲ್ದಾರರ ಕಚೇರಿಗೆ ಬಾಂಬ್ ಇಡುತ್ತಿದ್ದೇವೆ ಎಂದು ಬರೆಯಲಾಗಿತ್ತು. ಆದರೆ ಯಾವ ತಹಶಿಲ್ದಾರ್ ಕಚೇರಿ ಎಂದು ಸ್ಪಷ್ಟವಾಗಿ ತಿಳಿಸಿಲ್ಲವಾಗಿದ್ದು, ಕೂಡಲೇ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಅವರ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಎಲ್ಲರನ್ನೂ ಹೊರಗೆ ಕಳುಹಿಸಿ, ಕಚೇರಿ ತಪಾಸಣೆ ನಡೆಸಿದ್ದರು. ಅಲ್ಲದೇ ಕಚೇರಿಗೆ ನಿಯಮಿತವಾಗಿ ಬಂದು ಹೋಗುವವರ ಮಾಹಿತಿ ನೀಡುವಂತೆ ಕೋರಿದ್ದು, ಲಭ್ಯ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಭಟ್ಕಳದ ಘಟನೆಯ ಬೆನ್ನಲ್ಲೇ ಕಾರವಾರ ತಹಸೀಲ್ದಾರ್ ಕಚೇರಿಗೂ ಇದೇ ರೀತಿಯ ಬೆದರಿಕೆ ಇ-ಮೇಲ್ ಬಂದಿದೆ. ನಿನ್ನೆ ಮಂಗಳೂರು ಹಾಗೂ ಹಾಸನದಲ್ಲೂ ಇಂತಹದ್ದೇ ಬೆದರಿಕೆಗಳು ಬಂದಿದ್ದು, ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಉತ್ತರ ಕನ್ನಡದಲ್ಲಿ ಬಂದಿರುವ ಬೆದರಿಕೆ ಬಗ್ಗೆಯೂ ಪ್ರಕರಣ ದಾಖಲಿಸಿಕೊಂಡು, ಇ-ಮೇಲ್ ಮೂಲವನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಕಂಡುಬಂದರೂ, ಕಾರವಾರ ತಹಸೀಲ್ದಾರ್ ನರೋನಾ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಗಂಭೀರ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.