ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ಸಿದ್ದಾರ್ಥ ವೈದ್ಯಕೀಯ ಕಾಲೇಜನ್ನು ''''''''''''''''ಡ್ರೋನ್ ಬಾಂಬ್'''''''''''''''' ನಿಂದ ಉಡಾಯಿಸುತ್ತೇವೆಂಬ ಇಮೇಲ್ ಸಂದೇಶವೊಂದು ಶುಕ್ರವಾರ ಭಾರಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಕ್ಯಾಂಪಸ್‍ನಲ್ಲಿ ಉಪನ್ಯಾಸಕ ಡಾ.ಅಬ್ದುಲ್ ಅವರಿಗೆ ನಡೆದ ಅವಮಾನದ ಕಾರಣ, ಶುಕ್ರವಾರ ಮಧ್ಯಾಹ್ನ ಇಸ್ಲಾಮಿಕ್ ಪ್ರಾರ್ಥನೆ ನಂತರ 2 ಗಂಟೆಗೆ ಕ್ಯಾಂಪಸ್‍ನಲ್ಲಿ 15 ಸೈನೈಡ್ ಡೋಸ್ಡ್ ಐಇಡಿಗಳು ಸ್ಫೋಟಗೊಳ್ಳಲಿವೆ. ನಾವು ಕೇವಲ ಹಾನಿ ಮಾತ್ರ ಬಯಸುತ್ತೇವೆ, ನಾವು ಐಇಡಿಗಳನ್ನು ಇರಿಸಲು ಮಿನಿ ಡ್ರೋನ್‍ಗಳನ್ನು ಬಳಸಿದ್ದೇವೆ. ದಯವಿಟ್ಟು ಕಟ್ಟಡಗಳಲ್ಲಿರುವ ವಿದ್ಯಾರ್ಥಿಗಳನ್ನು ತೆರವುಗೊಳಿಸಿ ಎಂದು ಸೌರವ್ ಖಾನ್ ಕಳಿಸಿದ್ದ ಇಮೇಲ್ ಗೆ ಸಂದೇಶದಲ್ಲಿತ್ತು.
ಹಲ್ಲೆ ಪ್ರಕರಣದ ಸೇಡು:ಬುಧವಾರ ಕಾಲೇಜಿನಲ್ಲಿ ಉಪನ್ಯಾಸಕ ಡಾ.ಅಬ್ದುಲ್ ವಿದ್ಯಾರ್ಥಿನಿಯೊಬ್ಬರಿಗೆ ಪ್ರೇಮ ನಿವೇದನೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆ ಪ್ರಕರಣವೇ ಈ ಬೆದರಿಕೆಗೆ ಕಾರಣ ಎನ್ನಲಾಗಿದೆ. ನಮ್ಮವರ ಮೇಲೆ ಹಲ್ಲೆ ಮಾಡಿದ್ದೀರಿ, ನಾವು ಸುಮ್ಮನೆ ಕೂರುವುದಿಲ್ಲ ಎಂದು ಇಮೇಲ್‍ನಲ್ಲಿ ಸೇಡಿನ ಸಂದೇಶ ರವಾನಿಸಲಾಗಿತ್ತು ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ನೆಲಮಂಗಲ ಗ್ರಾಮಾಂತರ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಆಂತರಿಕ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾಲೇಜಿನ ಪ್ರತಿ ಮೂಲೆಯನ್ನು ಕೂಲಂಕುಷ ತಪಾಸಣೆ ನಡೆಸಿದರು. ಅನಾಮಧೇಯ ವ್ಯಕ್ತಿ ನೀಡಿದ್ದ 2 ಗಂಟೆಯ ಗಡುವು ಮುಗಿದರೂ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಎಲ್ಲಿಯೂ ಸ್ಫೋಟಕಗಳು ಪತ್ತೆಯಾಗದ ಕಾರಣ ಪೊಲೀಸರು ಇದೊಂದು ‘ಹುಸಿ ಬಾಂಬ್ ಬೆದರಿಕೆ’ ಎಂದು ಸ್ಪಷ್ಟಪಡಿಸಿದರು.
ಪೋಟೋ 8 : ಬಾಂಬ್ ನಿಷ್ಕ್ರಿಯದಳ ಕಾಲೇಜಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿರುವುದು.