ಅಭೂತಪೂರ್ವ ಯಶಸ್ಸು ಕಂಡ ಬೊಂಬೆನಾಡ ಗಂಗೋತ್ಸವ: ವಿಶ್ವನಾಥ್

KannadaprabhaNewsNetwork |  
Published : Jan 29, 2026, 01:45 AM IST
ಪೊಟೋ೨೮ಸಿಪಿಟಿ೧: ನಗರದ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದುಂತೂರು ವಿಶ್ವನಾಥ್ ಮಾತನಾಡಿದರು. | Kannada Prabha

ಸಾರಾಂಶ

ಮೂರು ದಿನಗಳ ಕಾಲ ನಡೆದ ಬೊಂಬೆನಾಡ ಗಂಗೋತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಇದೇ ಮೊದಲ ಬಾರಿ ತಾಲೂಕಿನಲ್ಲಿ ಆಯೋಜಿಸಿದ್ದ ಬೊಂಬೆನಾಡ ಗಂಗೋತ್ಸವ ಅಭೂತಪೂರ್ವ ಯಶಸ್ಸು ಕಂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಬೊಂಬೆನಾಡ ಗಂಗೋತ್ಸವ ಆಚರಣಾ ಸಮಿತಿ ಸಂಚಾಲಕ ದುಂತೂರು ವಿಶ್ವನಾಥ್ ತಿಳಿಸಿದರು.

ನಗರದ ೫ನೇ ಅಡ್ಡರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೨೩ರಿಂದ ೨೫ರವರೆಗೆ ಮೂರು ದಿನಗಳ ಕಾಲ ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ ತಾಲೂಕಿನ ಜನತೆ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು ಎಂದರು.

ವೇಷ, ಭೂಷಣ ಸಹಿತ ರಂಗಗೀತೆಗಳ ಸ್ಪರ್ಧೆ, ವಾಯ್ಸ್ ಆಫ್ ಬೊಂಬೆನಾಡು, ದಂಪತಿಗಳಿಗೆ ಭಾರತೀಯ ಸಂಪ್ರದಾಯದ ಉಡುಗೆ ಪ್ರದರ್ಶನ ಸ್ಪರ್ಧೆ, ಚಲನಚಿತ್ರ ಗೀತೆಗಳ ಸಮೂಹ ನೃತ್ಯ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮ್ಯಾರಥಾನ್ , ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆದಿದ್ದವು. ಇದಲ್ಲದೇ ಕಳೆದ ಒಂದು ತಿಂಗಳನಿಂದ ಹೋಬಳಿ ಮಟ್ಟದಲ್ಲಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಸೇರಿದಂತೆ ಹಲವು ಪಂದ್ಯಾವಳಿಗಳು ನಡೆದಿದ್ದವು. ಇವುಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದರು. ಇಲ್ಲಿ ಗೆದ್ದ ತಂಡಗಳು ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ಭಾಗವಹಿಸಲಿವೆ ಎಂದರು.

ಇವುಗಳ ಜತೆಗೆ ಸಾಧಕರ ಸಮಾವೇಶ, ದೇಹದಾರ್ಢ್ಯ ಸ್ಪರ್ಧೆ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಡೆಯ ದಿನ ಗಂಗರ ರಾಜಮನೆತನದ ಬಗ್ಗೆ ಉಪನ್ಯಾಸ ಆಯೋಜಿಸುವ ಮೂಲಕ ಗಂಗರ ಕೊಡುಗೆಯನ್ನು ಸ್ಮರಿಸಲಾಯಿತು ಎಂದರು.

ಭಾನುವಾರ ಸಂಜೆ ರಾಜೇಶ್ ಕೃಷ್ಣನ್ ಹಾಗೂ ನವೀನ್ ಸಜ್ಜು ಅವರ ತಂಡದಿಂದ ಆಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಸಿನಿಮಾ ನಟರಾದ ಜೋಗಿ ಪ್ರೇಮ್, ನಿನಾಸಂ ಸತೀಶ್, ಝೈದ್ ಖಾನ್, ಸಪ್ತಮಿಗೌಡ ಹಾಗೂ ಗಿಲ್ಲಿ ನಟ ಸೇರಿದಂತೆ ಹಲವರು ಭಾಗಿಯಾಗಿ ಜನರನ್ನು ರಂಜಿಸಿದ್ದರು. ಈ ಎಲ್ಲ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಜನ ಹಗಲು ಇರುಳು ಶ್ರಮಿಸಿದ್ದಾರೆ. ಇವರೆಲ್ಲಗೂ ಧನ್ಯವಾದ. ಏನಾದರೂ ಸಣ್ಣಪುಟ್ಟ ಲೋಪದೋಷ ಆಗಿದ್ದರೆ ಕ್ಷಮಿಸುವಂತೆ ಮನವಿ ಮಾಡಿದರು.

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್ ಮಾತನಾಡಿ, ಮೂರು ದಿನಗಳ ಕಾಲ ನಡೆದ ಬೊಂಬೆನಾಡ ಗಂಗೋತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ನಗರಸಭೆ ಪ್ರಭಾರ ಅಧ್ಯಕ್ಷ ಲೋಕೇಶ್, ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್, ಸದಸ್ಯರಾದ ಸತೀಶ್ ಬಾಬು, ರೇವಣ್ಣ, ಮತೀನ್, ಮುಖಂಡರಾದ ಕೋಕಿಲಾರಾಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮತ್ತೊಂದು ಖಾಸಗಿ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿ!
ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ದಿರಿಸು ಕಡ್ಡಾಯ ?