ಅಗತ್ಯ ರಸಗೊಬ್ಬರ ಸರಬರಾಜಿಗೆ ಬೊಮ್ಮಾಯಿ ಆಗ್ರಹ

KannadaprabhaNewsNetwork | Published : May 23, 2024 1:03 AM

ಸಾರಾಂಶ

ಹಾವೇರಿ ಜಿಲ್ಲೆಗೆ ಅಗತ್ಯವಿರುವ ಡಿಎಪಿ, ಯುರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡಲೇ ಸರಬರಾಜು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಹಾವೇರಿ: ಹಾವೇರಿ ಜಿಲ್ಲೆಗೆ ಅಗತ್ಯವಿರುವ ಡಿಎಪಿ, ಯುರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡಲೇ ಸರಬರಾಜು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು, ತಮಗೆ ಈಗಾಗಲೇ ಮಾಹಿತಿಯಿರುವಂತೆ ಕಳೆದ ಒಂದು ವರ್ಷ ನಮ್ಮ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷ ಅವರು ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗೆ ವೆಚ್ಚ ಮಾಡಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಲದ ಹೊರೆ ರೈತರ ಮೇಲೆ ಹೆಚ್ಚಾಗಿ ಇದ್ದು, ಕೆಲವರಂತೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ಪರಿಹಾರ ಕೊಟ್ಟಿರುವುದು ಅತ್ಯಲ್ಪ ಹಾಗೂ ತಡವಾಗಿದೆ. ಕೃಷಿ ಇಲಾಖೆ ತಿಳಿಸಿದಂತೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ. 50 ಕಡಿಮೆಯಾಗಿದೆ. ಇತ್ತೀಚಿಗೆ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯಿಂದ ರೈತರು ಉತ್ಸುಕರಾಗಿ ಬಿತ್ತನೆ ಮಾಡಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಗೊಬ್ಬರ ಪಡೆದುಕೊಳ್ಳಲು ಮುಂದೆ ಬಂದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ ದಾಸ್ತಾನು ಕಡಿಮೆಯಿದ್ದು ನೂಕುನುಗ್ಗಲು ಆಗುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಬಿತ್ತನೆ ಪೂರ್ವದಲ್ಲಿ ಬಹಳಷ್ಟು ಅವಶ್ಯಕತೆಯಿದ್ದು, ಸುಮಾರು 35 ಸಾವಿರ ಮೆಟ್ರಿಕ್ ಟನ್ ಮುಂಗಾರು ಹಂಗಾಮಿನಲ್ಲಿ ಬೇಕಾಗಿದೆ. ಇಲ್ಲಿಯವರೆಗೂ ಸುಮಾರು 6,500 ಮೆಟ್ರಿಕ್ ಟನ್ ಮಾತ್ರ ಸರಬರಾಜು ಆಗಿದೆ. ಕೂಡಲೇ ಬಾಕಿಯಿರುವ 29,000 ಮೆಟ್ರಿಕ್ ಟನ್ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಒದಗಿಸಬೇಕೆಂದು ಪತ್ರದಲ್ಲಿ ಬೊಮ್ಮಾಯಿ ಆಗ್ರಹಿಸಿದ್ದಾರೆ.ಇದೇ ರೀತಿ ಯೂರಿಯಾ 65 ಸಾವಿರ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 38 ಸಾವಿರ ಮೆಟ್ರಿಕ್ ಟನ್ ಕೂಡಲೇ ಸರಬರಾಜು ಮಾಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಮಳೆಯಾಗಿರುವುದರಿಂದ ಗೊಬ್ಬರ ತಯಾರಿಕಾ ಕಂಪನಿಗಳ ಹಾಗೂ ಅಧಿಕಾರಿಗಳ ಸಭೆ ಕರೆದು ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಬೇಕೆಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.

Share this article