ಕನ್ನಡಪ್ರಭ ವಾರ್ತೆ ಹಾವೇರಿ
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ನಗರದಲ್ಲಿ ನಾಮಪತ್ರ ಸಲ್ಲಿಕೆಗೆ ಸಹಸ್ರಾರು ಜನರನ್ನು ಸೇರಿಸುವ ಮೂಲಕ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಯಾಲಕ್ಕಿ ನಗರ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸಿತು.ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಇಲ್ಲಿನ ಹುಕ್ಕೇರಿಮಠದ ಸದಾಶಿವ ಶ್ರೀಗಳ ಆಶೀರ್ವಾದ ಪಡೆದು ಬಳಿಕ ಅಲ್ಲಿಂದಲೇ ಬೃಹತ್ ಮೆರವಣಿಗೆ ಆರಂಭಿಸಿದರು. ಮೆರವಣಿಗೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಸೇರಿದಂತೆ ಅಪಾರ ಜನಸ್ತೋಮ ಸೇರಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ ಸಹ್ರಸಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು ''''''''ಮೋದಿ ಮೋದಿ-ಬೊಮ್ಮಾಯಿ ಬೊಮ್ಮಾಯಿ'''''''' ಎಂದು ಘೋಷಣೆ ಕೂಗಿದರು.
ದೇಶಕ್ಕೆ ಮೋದಿ, ಬೊಮ್ಮಾಯಿ:ಮೆರವಣಿಗೆಯಲ್ಲಿ ಜಾಂಜ್ ಮೇಳ, ವಿವಿಧ ಗೊಂಬೆಗಳು, ಚೆಂಡೆ ಮೇಳ, ಜಗ್ಗಲಿಗೆ, ಕೋಳಿ, ಮೀನು ಕುಣಿತ, ಮಹಿಳಾ ಡೊಳ್ಳು ಕುಣಿತ, ಕೋಲಾಟ, ಹನುಮನ ವೇಷಧಾರಿಗಳು ಗಮನಸೆಳೆದರು. ಸುಮಾರು ಎರಡು ಗಂಟೆಗಳ ಕಾಲ ಬೃಹತ್ ರೋಡ್ ಶೋ ನಡೆಯಿತು. ರೋಡ್ ಶೋದಲ್ಲಿ `ದೇಶಕ್ಕೆ ಮೋದಿ, ಹಾವೇರಿ-ಗದಗಿಗೆ ಬೊಮ್ಮಾಯಿ'''''''''''''''' ಘೋಷಣೆ ಮೊಳಗಿತು. ಮೆರವಣಿಗೆಯಲ್ಲಿ ಬಿಜೆಪಿ ಟೋಪಿ ಹಾಕಿಕೊಂಡು ತೆರೆದ ವಾಹನದ ಮುಂದೆ ಹೆಜ್ಜೆ ಹಾಕಿದರು. ಅಲ್ಲಲ್ಲಿ ಮಹಿಳೆಯರು ಆರತಿ ಬೆಳಗಿದರು. ಮೆರವಣಿಗೆಯುದ್ದಕ್ಕೂ ಪುಷ್ಪವೃಷ್ಟಿ ಮಾಡಲಾಯಿತು. ಬಿಸಿಲಿಗೆ ಸುಸ್ತಾದ ಕಾರ್ಯಕರ್ತರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಯಿತು. ರೋಡ್ ಶೋ ಮಾರುಕಟ್ಟೆ ರಸ್ತೆ, ಗಾಂಧಿ ವೃತ್ತ, ಜೆಪಿ ವೃತ್ತ, ಜೆ.ಎಚ್. ಪಟೇಲ್ ಮಾರ್ಗವಾಗಿ ಹೊಸಮನಿ ಸಿದ್ದಪ್ಪಕ್ಕೆ ಬಂದು ಮುಕ್ತಾಯಗೊಂಡಿತು.ಮೇಳೈಸಿದ ಮೈತ್ರಿಧ್ವಜಗಳು:
ಲೋಕಸಭೆ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಎರಡೂ ಪಕ್ಷಗಳ ಧ್ವಜಗಳನ್ನು ಹಿಡಿದು ಕಾರ್ಯಕರ್ತರು ಒಟ್ಟಾಗಿ ಹೆಜ್ಜೆಹಾಕಿದರು.ರಾಜ್ಯ ನಾಯಕರ ಸಾಥ್
ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆಯ ರೋಡ್ ಶೋಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ. ಪಾಟೀಲ್, ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಚಿತ್ರನಟಿ ತಾರಾ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪಾಲ್ಗೊಂಡಿದ್ದರು.ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲೇಬೇಕು
ಇಂದಿನ ರೋಡ್ ಶೋಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾಗರೋಪಾದಿಯಲ್ಲಿ ಜನಸಾಗರ ಹರಿದು ಬಂದಿರೋದಕ್ಕೆ ಕೋಟಿ-ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಇದು ಲೋಕಸಭಾ ಚುನಾವಣೆಯ ವಿಜಯದ ಸಂಕೇತ ಎಂದು ಅಭ್ಯರ್ಥಿ, ಮಾಜಿ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತಿನ ಕಾರ್ಯಕ್ರಮಕ್ಕೆ ಆಗಮಿಸಿರುವ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಎಲ್ಲ ಜನರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮೋದಿಯವರು ಮತ್ತೆ ಪ್ರಧಾನಿ ಆಗಲೇಬೇಕು. ಬಿಜೆಪಿ ಕೇಂದ್ರದಲ್ಲಿ ಈ ಸಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದು ರಾಜ್ಯದಲ್ಲಿ 28 ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು.
ಹಾವೇರಿ ಜಿಲ್ಲೆಯಲ್ಲಿ ಶಿಕ್ಷಣ, ಉದ್ಯೋಗ, ನೀರಾವರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 1 ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದು, ಸಿಂಗಟಾಲೂರು ಯೋಜನೆಯನ್ನು ಪೂರ್ಣಗೊಳಿಸುತ್ತೇನೆ ಎಂದರು.ಮೀಸಲಾತಿ ಹೆಚ್ಚಳ
ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡುವ ಭಾಗ್ಯ ನನ್ನದಾಗಿತ್ತು. ಎಸ್ಸಿಗೆ ಮೀಸಲಾತಿ ಪ್ರಮಾಣವನ್ನು ಶೇ. 15ರಿಂದ ಶೇ. 17ಕ್ಕೆ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಒಬಿಸಿಯಲ್ಲಿ 2ಡಿಗೆ ಅವಕಾಶ ಕಲ್ಪಿಸಿದ್ದು ಮೀಸಲಾತಿ ಪ್ರಮಾಣವನ್ನು ಶೇ. 9ಕ್ಕೆ ಹೆಚ್ಚಳ ಮಾಡಲಾಗಿದೆ. ಅದು ಕೇಂದ್ರ ಸರ್ಕಾರದಲ್ಲಿದ್ದು, ಎಲ್ಲರೂ ಒಟ್ಟಾಗಿ ಸೇರಿ ಅದನ್ನು ಜಾರಿ ಮಾಡಿಸುವ ಕೆಲಸ ಮಾಡುತ್ತೇವೆ.ಬಸವರಾಜ ಬೊಮ್ಮಾಯಿ, ಬಿಜೆಪಿ ಅಭ್ಯರ್ಥಿ.ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ
ಹಾವೇರಿ:ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೊಮ್ಮಾಯಿ ತಮ್ಮ ಪಕ್ಕದಲ್ಲಿ ಬಂದು ಕುಳಿತುಕೊಳ್ಳಬೇಕು ಎಂಬುದು ಪ್ರಧಾನಿ ಮೋದಿ ಅವರ ಅಪೇಕ್ಷೆ ಇದೆ. ಹೀಗಾಗಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಲೋಕಸಭೆ ಚುನಾವಣೆ ಮುಗಿಯುವವರೆಗೂ ಮನೆಮನೆಗೆ ತೆರಳಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಹೋಗುವ ಸಂಕಲ್ಪ ಮಾಡಿದ್ದಾರೆ. ನಾವೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬಸವರಾಜ ಬೊಮ್ಮಾಯಿ ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಾಯ್ಕಾಟ್ ಮಾಡಿಯಾರು ರಾಮಮಂದಿರ ಉದ್ಘಾಟನೆ ಬಾಯ್ಕಾಟ್ ಮಾಡಿದರೊ ಅವರನ್ನು ಬಾಯ್ಕಾಟ್ ಮಾಡಿ, ಯಾರು ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದು ಹೇಳುತ್ತಾರೊ ಅವರನ್ನು ಹೊರಗೆ ಹಾಕಿ, ಯಾರು ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಬೆಂಬಲಿಸುತ್ತಾರೊ ಅವರನ್ನು ಸಮುದ್ರಕ್ಕೆ ಹಾಕಿ, ಹನುಮಾನ್ ಚಾಲೀಸ್ ಪಠಣವನ್ನು ವಿರೋಧಿಸುವವರನ್ನು ಹನುಮಂತನ ರೀತಿ ಸುಟ್ಟು ಹಾಕಿ.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು.