ಕರಾವಳಿಯ ಅಲ್ಲಲ್ಲಿ ಮಳೆ

KannadaprabhaNewsNetwork | Published : Apr 20, 2024 1:07 AM

ಸಾರಾಂಶ

ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ಕೊಂಚ ತಂಪನ್ನೆರೆಯಿತು. ಚಾರ್ಮಾಡಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ನೆರಿಯ ಕಡೆ ಗಾಳಿ, ಗುಡುಗಿನ ಸಹಿತ ಮಳೆ ಬಿದ್ದಿದೆ.

ಮಂಗಳೂರು: ಕರಾವಳಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಬೇಸಿಗೆ ಮಳೆಯಾಗಿದ್ದು, ಬಿಸಿಲಿನ ಧಗೆಯಿಂದ ಬಸವಳಿದ ಜನತೆಗೆ ತುಸು ತಂಪಿನ ಅನುಭವ ಸಿಕ್ಕಿದೆ.

ಸುಳ್ಯ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ. ಮಂಗಳೂರಿನ ಕೆಲವು ಭಾಗದಲ್ಲಿ ಹನಿ ಮಳೆಯಾಗಿದೆ. ಏ.20 ಮತ್ತು 21ರಂದು ಕರಾವಳಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದ.ಕ.ದಲ್ಲಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮಂಗಳೂರಿನಲ್ಲಿ ಉಷ್ಣ ಗಾಳಿ ಪ್ರಭಾವ ಹೆಚ್ಚಾಗಿದೆ.ಬೆಳ್ತಂಗಡಿ: ಹಲವೆಡೆ ಉತ್ತಮ ಮಳೆ

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ, ನೆರಿಯ ಮುಂಡಾಜೆ, ತೋಟತ್ತಾಡಿ, ಚಿಬಿದ್ರೆ, ಕಡಿರುದ್ಯಾವರ ಮೊದಲಾದ ಗ್ರಾಮಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆ ಸುರಿದಿದೆ.

ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲಿದ್ದ ಈ ಭಾಗದ ಜನರಿಗೆ ಮಳೆ ಕೊಂಚ ತಂಪನ್ನೆರೆಯಿತು. ಚಾರ್ಮಾಡಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ನೆರಿಯ ಕಡೆ ಗಾಳಿ, ಗುಡುಗಿನ ಸಹಿತ ಮಳೆ ಬಿದ್ದಿದೆ.

ಅಂದು ನೀರು ಹಾಕಿ ಅಂದ್ರು ಇಂದು ಕೆಸರೋ ಕೆಸರು ಎನ್ನುವುದೇ?: ಮುಂಡಾಜೆ ಗ್ರಾಮದ ನಿಡಿಗಲ್ -ಸೀಟು- ಸೋಮಂತಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಅಂಗವಾಗಿ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಲಾಗಿದ್ದು, ಕೆಸರುಮಯ ವಾತಾವರಣ ಉಂಟಾಗಿ ವಾಹನ ಸವಾರರು ತೀವ್ರ ಪರದಾಟ ನಡೆಸಿದರು. ಅಂಬಡ್ತ್ಯಾರು ಎಂಬಲ್ಲಿ ಮಣ್ಣಿನ ರಸ್ತೆಯಲ್ಲಿ ಜಾರಿದ ಟ್ಯಾಂಕರ್ ನಿಂದಾಗಿ ಹಲವು ಸಮಯ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು. ಬೇಕಾಬಿಟ್ಟಿ ದ್ವಿಚಕ್ರವಾಹನಗಳನ್ನು ನುಗ್ಗಿಸಿದ ಪರಿಣಾಮ ಟ್ರಾಫಿಕ್ ಜಾಮ್ ಇನ್ನಷ್ಟು ಹೆಚ್ಚಲು ಕಾರಣವಾಯಿತು. ಹಲವು ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದ ಘಟನೆಯು ನಡೆಯಿತು. ಪಾದಚಾರಿಗಳಿಗೂ ರಸ್ತೆ ಬದಿ ನಡೆದಾಡಲು ಅಡ್ಡಿಯಾಯಿತು.

Share this article