ಹಿರಿಯ ಸಾಹಿತಿ ಭೈರಪ್ಪ ಅಂತಿಮ ದರ್ಶನ ಪಡೆದ ಬೊಮ್ಮಾಯಿ

KannadaprabhaNewsNetwork |  
Published : Sep 26, 2025, 01:00 AM IST
26 | Kannada Prabha

ಸಾರಾಂಶ

ಕಳೆದ ಶತಮಾನದ ದಿಗ್ಗಜರಲ್ಲಿ ತಮ್ಮದೇ ಆದ ಗುರುತು ಹೊಂದಿದ್ದ, ಕ್ರಿಯಾಶೀಲ ವ್ಯಕ್ತಿತ್ವವನ್ನು ಭೈರಪ್ಪ ಅವರು ಹೊಂದಿದ್ದರು. ಬಹಳಷ್ಟು ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ಹೊರಗಡೆ ಇಟ್ಟು ವಿಶ್ಲೇಷಣೆ ಮಾಡುತ್ತಾರೆ. ಆದರೆ ಇವರು ಒಳಗಡೆ ನಿಂತು ಸಾಹಿತ್ಯ ರಚನೆ ಮಾಡುತ್ತಿದದ್ದು ಇವರ ವಿಶೇಷತೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಎಸ್‌.ಎಲ್‌. ಭೈರಪ್ಪ ಅವರ ನಿಧನದಿಂದ ನಾವು ಶ್ರೇಷ್ಠ ಸಾಹಿತಿ, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕಲಾಮಂದಿರ ಆವರಣದಲ್ಲಿ ಬೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು.

ಕಳೆದ ಶತಮಾನದ ದಿಗ್ಗಜರಲ್ಲಿ ತಮ್ಮದೇ ಆದ ಗುರುತು ಹೊಂದಿದ್ದ, ಕ್ರಿಯಾಶೀಲ ವ್ಯಕ್ತಿತ್ವವನ್ನು ಭೈರಪ್ಪ ಅವರು ಹೊಂದಿದ್ದರು. ಬಹಳಷ್ಟು ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ಹೊರಗಡೆ ಇಟ್ಟು ವಿಶ್ಲೇಷಣೆ ಮಾಡುತ್ತಾರೆ. ಆದರೆ ಇವರು ಒಳಗಡೆ ನಿಂತು ಸಾಹಿತ್ಯ ರಚನೆ ಮಾಡುತ್ತಿದದ್ದು ಇವರ ವಿಶೇಷತೆ. ಈ ಧೈರ್ಯ ಬಹಳ ಅಪರೂಪ ಎಂದರು.

ಅವರಿಗೆ ನೀಡಿರುವ ಪ್ರಶಸ್ತಿಗಳ ಮೂಲಕ ಪ್ರಶಸ್ತಿಗೆ ಗೌರವ ಬಂದಿದೆ. ಅವರು ಎಷ್ಟೇ ಎತ್ತರಕ್ಕೆ ಬೆಳೆದರು ತಮ್ಮ, ಊರು, ಬೇರನ್ನು ಬಿಟ್ಟಿರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಭೇಟಿ ಮಾಡಿ ನಮ್ಮೂರಿಗೆ ನೀರು ಕೊಡಪ್ಪ ಅಂತ ಕೇಳಿದ್ದರು. ಅದನ್ನು ಬಿಟ್ಟು ಬೇರೆ ಏನೂ ಕೇಳಿರಲಿಲ್ಲ. ಕುಡಿಯುವ ನೀರಿನ ಯೋಜನೆ ಜಾರಿ ಬಳಿಕವೂ ಅದನ್ನ ಫಾಲೋ ಅಪ್ ಮಾಡಿದ್ದಾಗಿ ಅವರು ಹೇಳಿದರು.

ವಂಶವೃಕ್ಷ ಕ್ರಾಂತಿಕಾರಿ ಕಾದಂಬರಿಯಾಗಿತ್ತು. ದೇಶದಲ್ಲಿ ಭಾರಿ ಅಲ್ಲೊಲ ಕಲ್ಲೋಲ ಸೃಷ್ಟಿಸಿತು. ಆ ಕಾದಂಬರಿ ಸಿನಿಮಾ ಆದ ಮೇಲೆ ಸಮಾಜದಲ್ಲಿ ಹಲವು ಬದಲಾವಣೆ ಆಗಿದ್ದಾಗಿ ಅವರು ತಿಳಿಸಿದರು.

ಭೈರಪ್ಪ ಅವರ ನಿಧನಕ್ಕೆ ವಿಧಾನ ಪರಿಷತ್‌ ಸದಸ್ಯ ಕೆ.ಶಿವಕುಮಾರ್ ಕಂಬನಿ

ಕನ್ನಡಪ್ರಭ ವಾರ್ತೆ ಮೈಸೂರು

ನಾಡಿನ ಶ್ರೇಷ್ಠ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ವಿಧಾನ ಪರಿಷತ್‌ ಸದಸ್ಯ ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.

ಕನ್ನಡದ ಬಗ್ಗೆ ಭೈರಪ್ಪ ಅವರದು ಅಗಾಧವಾದ ಪ್ರೀತಿ ಹಾಗೂ ಬದ್ಧತೆ. ಸೈದ್ಧಾಂತಿಕವಾಗಿ ಅವರ ನಿಲುವನ್ನು ವಿರೋಧಿಸಬಹುದಿತ್ತು. ಆದರೆ, ಅವರ ಅನುಭವದ ಗಟ್ಟಿ ಬರವಣಿಗೆ, ಅನುಭವಿಸಿ ಬರೆಯುವ ವಿಧಾನ, ಪಾಂಡಿತ್ಯ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಯಾರೇ ಆದರೂ ತಲೆಬಾಗಲೇಬೇಕಿತ್ತು. ಭೈರಪ್ಪ ಅವರಿಗೆ ಅಪಾರ ಓದುಗ ಅಭಿಮಾನಿ ಬಳಗವಿತ್ತು. ಅವರು ಯಾವುದೇ ಕೃತಿ ರಚಿಸಿದರೂ ಮೊದಲು ಅಧ್ಯಯನ, ಸಂಶೋಧನೆ ಮಾಡುತ್ತಿದ್ದರು. ಕ್ಷೇತ್ರ ಕಾರ್ಯ ಮಾಡುತ್ತಿದ್ದರು. ನಂತರ ಬರವಣಿಗೆಯಾಗಿತ್ತು.

ಅವರೊಬ್ಬರು ಸ್ಟಾರ್‌ ಕಾದಂಬರಿಕಾರರಾಗಿದ್ದರು. ದೇಶ-ವಿದೇಶಗಳ ಅನೇಕ ಭಾಷೆಗಳಿಗೆ ಅವರ ಕಾದಂಬರಿಗಳು ತರ್ಜುಮೆಗೊಂಡಿರುವುದು ದಾಖಲೆಯಾಗಿದೆ ಎಂದಿದ್ದಾರೆ.

ಭೈರಪ್ಪನವರದು ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವ. ಇಡೀ ಕರ್ನಾಟಕದ ಜನಮಾನಸವನ್ನು ಆವರಿಸಿದ ವ್ಯಕ್ತಿ ಅವರಾಗಿದ್ದರು. ಕಡು ಬಡತನದಲ್ಲಿ ಬೆಳೆದ ಅವರು ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡಜನರ ಕಲ್ಯಾಣಕ್ಕಾಗಿ ದಾನ ಮಾಡುತ್ತಿದ್ದರು. ತಮಗೆ ಬಂದ ಪ್ರಶಸ್ತಿಗಳ ಮೊತ್ತವನ್ನೂ ಸದ್ವಿನಿಯೋಗ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಟ್ರಸ್ಟ್ ಸ್ಥಾಪಿಸಿ ತಮ್ಮ ಪುಸ್ತಕಗಳ ರಾಯಲ್ಟಿಯ ಹಣವನ್ನು ಅದಕ್ಕೆ ಕೊಟ್ಟಿದ್ದರು ಎಂದು ಶಿವಕುಮಾರ್ ನೆನಪಿಸಿಕೊಂಡಿದ್ದಾರೆ.

ಭೈರಪ್ಪ ಅವರು ತಾವು ಹುಟ್ಟಿ, ಬೆಳೆದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದ ಬಗ್ಗೆ ಸದಾ ತುಂಬು ಅಭಿಮಾನವಿತ್ತು. ಅವರ ತಾಯಿ ಗೌರಮ್ಮ ಅವರ ಹೆಸರಿನಲ್ಲಿ ಗೌರಮ್ಮ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿದ್ದರು. ಸಂತೇಶಿವರ ಹಾಗೂ ಸುತ್ತಮುತ್ತಲ 20 ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು 25 ಕೋಟಿ ರೂ. ಏತನೀರಾವರಿ ಯೋಜನೆ ಜಾರಿಗೆ ಸಂಕಲ್ಪ ತೊಟ್ಟರು. ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಈ ಯೋಜನೆ ಜಾರಿಯಾಗುವಂತೆ ನೋಡಿಕೊಂಡರು. ಈ ಯೋಜನೆಯಿಂದ ಅಕ್ಕಪಕ್ಕದ ಕೆರೆಗಳು ತುಂಬಿ ಅಂತರ್ಜಲವೂ ಹೆಚ್ಚಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಇದರ ಶ್ರೇಯಸ್ಸು ಭೈರಪ್ಪ ಅವರಿಗೆ ಸಲ್ಲಬೇಕು ಎಂದಿದ್ದಾರೆ.

ಪತ್ರಕರ್ತನಾಗಿ ಅನೇಕ ಬಾರಿ ಭೈರಪ್ಪ ಅವರನ್ನು ಭೇಟಿ ಮಾಡಿ ಮಾತಾಡಿಸಿದ್ದೇನೆ. ಅವರ ಸಭೆ, ಸಮಾರಂಭಗಳನ್ನು ವರದಿ ಮಾಡಿದ್ದೇನೆ. ಅವರ ವಿಚಾರಗಳಲ್ಲಿ ಬಹಳ ಸ್ಪಷ್ಟತೆ ಇತ್ತು. ನಿಲುವು ಧೃಡವಾಗಿತ್ತು. ವಿವಾದಗಳಿಗೆ ಅವರು ಹೆದರುತ್ತಿರಲಿಲ್ಲ. ತಮ್ಮ ಅಭಿಪ್ರಾಯಗಳನ್ನು ಮುಂದಿಡಲು ಹಿಂಜರಿಯುತ್ತಿರಲಿಲ್ಲ ಎಂದು ಶಿವಕುಮಾರ್‌ ಮೆಲುಕು ಹಾಕಿದ್ದಾರೆ.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ