ಬೊಮ್ಮನಹಳ್ಳಿ ಬಾಬು ಮತದಾರರಿಗೆ ಹಣ ಹಂಚಿ ಹಣ ಅವಮಾನ

KannadaprabhaNewsNetwork |  
Published : Jun 10, 2026, 01:45 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅಕ್ರಮವಾಗಿ ದುಡಿದ ಹಣವನ್ನು ಹಂಚಿ ಚುನಾವಣೆ ಗೆಲ್ಲುವ ಮುಂಗನಸ್ಸಿನಲ್ಲಿರುವ ಉದ್ಯಮಿ ಬೊಮ್ಮನಹಳ್ಳಿ ಬಾಬುರವರನ್ನು ಹಿರಿಯೂರಿನ ಸ್ವಾಭಿಮಾನಿ ಮತದಾರರು ತಿರಸ್ಕರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಹಿರಿಯೂರು ಉಪ ಚುನಾವಣೆಯ ಅಭ್ಯರ್ಥಿ ಎಂದು ಪ್ರಚಾರ ನಡೆಸುತ್ತಿರುವ ಬೊಮ್ಮನಹಳ್ಳಿ ಬಾಬುರವರಿಗೆ ಸರ್ಕಾರದ ಇಲಾಖೆಯಲ್ಲಿನ ಸೌಲಭ್ಯಗಳ ಕಿಂಚಿತ್ತೂ ಮಾಹಿತಿ ಇಲ್ಲ. ಸುಮ್ಮನೆ ಹಿರಿಯೂರಿನ ಮುಗ್ದ ಜನರಿಗೆ ಹಣದ ಆಮಿಷ ತೋರಿಸಿಕೊಂಡು ಓಡಾಡುತ್ತಿದ್ದಾರೆ. ಸ್ಥಳೀಯರನ್ನು ಗೆಲ್ಲಿಸಿ ಎಂದು ಹೇಳಿಕೊಂಡು ಓಡಾಡುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಿರಿಯೂರು ತಾಲೂಕನ್ನು ಹೈಟೆಕ್ ಸಿಟಿ ಮಾಡುತ್ತೇನೆ ಎಂದು ಹೇಳುವ ಬಾಬುರವರಿಗೆ ಈ ತಾಲೂಕಿನ ಮೂಲ ಸಮಸ್ಯೆಗಳ ಅರಿವೇ ಇಲ್ಲ. ರೈತರ ಸಂಕಷ್ಟಗಳ ಕಿಂಚಿತ್ತೂ ಮಾಹಿತಿ ಇಲ್ಲದ ಅವರು ಹಸಿರು ಶಾಲು ಹಾಕಿಕೊಂಡು ರೈತನ ಸೋಗಿನಲ್ಲಿ ಕಾಣಿಸಿಕೊಳ್ಳುತ್ತಾರೆ. ನಾಟಕೀಯ ವರ್ತನೆಯ ಮೂಲಕ ತಾಲೂಕಿನ ಜನರನ್ನು ಯಾಮಾರಿಸಲಾಗುತ್ತಿದೆ. ಅಕ್ರಮ ಆಸ್ತಿ ಸಂಪಾದನೆಯನ್ನು ಕಾಪಾಡಿಕೊಳ್ಳಲು ಅಧಿಕಾರ ಹುಡುಕಿಕೊಂಡು ಬಂದವರಿಂದ ತಾಲೂಕಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸ್ಥಳೀಯರನ್ನು ಗೆಲ್ಲಿಸದ ಹೊರತು ಈ ತಾಲೂಕಿನ ಅಭಿವೃದ್ಧಿ ಅಸಾಧ್ಯ. ಮಸಿಯಪ್ಪ ಮತ್ತು ರಾಮಯ್ಯ ಇಬ್ಬರನ್ನು ಬಿಟ್ಟರೆ ಈ ತಾಲೂಕನ್ನು ಆಳಿರುವವರೆಲ್ಲರೂ ಹೊರಗಿನವರೇ ಆಗಿದ್ದಾರೆ. ಯಾವ ಪಕ್ಷವೇ ಆಗಲಿ ತಾಲೂಕಿನ ಜನರು ಎಚ್ಛೆತ್ತುಕೊಂಡು ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡು ಓಡಾಡುತ್ತಾ ಇಡೀ ತಾಲೂಕಿನ ಮತದಾರರನ್ನು ಹಣದಿಂದಲೇ ಖರೀದಿ ಮಾಡಿಬಿಡುತ್ತೇನೆ ಎಂಬಂತೆ ವರ್ತಿಸುತ್ತಿರುವ ಬೊಮ್ಮನಹಳ್ಳಿ ಬಾಬುರವರ ಹಣದ ಮೂಲದ ಬಗ್ಗೆ ತನಿಖೆ ಆಗಬೇಕು. ಹಿರಿಯೂರಿನ ಮತದಾರರ ಮರ್ಯಾದೆ ಕಳೆಯಲೆಂದೇ ಹಣ ಹಂಚುತ್ತಿರುವ ಬಾಬುರವರು ಈ ಹಿಂದೆಯೂ ಚುನಾವಣೆಗೆ ನಿಲ್ಲುತ್ತೇನೆ ಎಂದು ತಾಲೂಕಿಗೆ ಬಂದು ಸ್ಪರ್ಧಿಸದೇ ವಾಪಸ್ ಹೋಗಿದ್ದರು. ಆಗ ಹೋದವರು ಈಗ ಬಂದು ನಾಟಕ ಶುರು ಮಾಡಿದ್ದಾರೆ. ಅಮಾಯಕರನ್ನು ಹಣದ ಆಮಿಷದಿಂದ ಕಾಪಾಡಬೇಕಾದ ಪರಿಸ್ಥಿತಿ ಇದೆ. ರಾಜಾರೋಷವಾಗಿ ಹಣದ ಕಟ್ಟು ಹಿಡಿದು ಸಹಾಯ ಮಾಡುವ ಹೆಸರಿನಲ್ಲಿ ತಾಲೂಕಿನ ಮರ್ಯಾದೆ ಕಳೆಯುತ್ತಿರುವ ಬಾಬುರವರ ಹಣದ ಮೂಲ ತನಿಖೆಯಾಗಲಿ ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಸಿದ್ದರಾಮಣ್ಣ ಮಾತನಾಡಿ, ಬೊಮ್ಮನಹಳ್ಳಿ ಬಾಬು ಹಂಚುತ್ತಿರುವ ಹಣದ ಪರಿ ನೋಡಿದರೆ ಚುನಾವಣೆ ಯಾವ ರೀತಿ ನಡೆಯಲಿವೆಯೋ ಎಂಬ ಆತಂಕ ಶುರುವಾಗಿದೆ. ಚುನಾವಣೆ ದಿನಾಂಕವೇ ನಿಗದಿಯಾಗಿಲ್ಲ. ಆಗಲೇ ಬಂದು ಕಂತೆ ಕಂತೆ ಹಣ ಹಂಚುತ್ತಿರುವ ಬಾಬುರವರ ಹಣದ ಲೆಕ್ಕ ಕೇಳಬೇಕಾದ ಅಧಿಕಾರಿಗಳು ಎಲ್ಲಿದ್ದಾರೆ? ಕೂಡಲೇ ಅವರ ಹಣದ ಥೈಲಿಯ ಹಿಂದಿನ ರಹಸ್ಯ ತಿಳಿಯಬೇಕು. ಅಧಿಕಾರಿಗಳು ಈ ತಕ್ಷಣ ಅವರ ಮೇಲೆ ಕ್ರಮ ವಹಿಸಬೇಕು ಎಂದರು.

ತಾಲೂಕು ಅಧ್ಯಕ್ಷ ಬಳಘಟ್ಟ ವೆಂಕಟೇಶ್ ಮಾತನಾಡಿ, ಎಲ್ಲಿಂದಲೋ ಬಂದು ಹಸಿರು ಶಾಲು ಹಾಕಿಕೊಂಡು ಫೋಟೋಗೆ ಫೋಸ್ ಕೊಟ್ಟರೆ ತಾಲೂಕಿನ ನೀರಿನ ಸಮಸ್ಯೆ ಬಗೆಹರಿಯುತ್ತದಾ? ಜನರು ಅರ್ಥ ಮಾಡಿಕೊಳ್ಳಬೇಕು. ಅವರು ಕೊಡುವ ಹಣ ಶಾಶ್ವತವಲ್ಲ. ತಾಲೂಕನ್ನು ಅಭಿವೃದ್ಧಿ ಮಾಡುವವರನ್ನು ಆಯ್ಕೆ ಮಾಡಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸಣ್ಣ ತಿಮ್ಮಣ್ಣ, ನಿಂಗಪ್ಪ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗ ತಾರತಮ್ಯದ ವಿರುದ್ಧ ಒಕ್ಕೊರಲಿನ ಹೋರಾಟ ಅಗತ್ಯ
4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ