ವಿದ್ಯಾರ್ಥಿಗಳು, ಉಪನ್ಯಾಸಕರ ಬಾಂಧವ್ಯ ನಿರಂತರವಾಗಿರಬೇಕು: ಡಾ.ಎಚ್.ಎಸ್.ರವೀಂದ್ರ ಅಭಿಮತ

KannadaprabhaNewsNetwork |  
Published : Jul 16, 2024, 12:31 AM IST
12ಕೆಎಂಎನ್ ಡಿ22 | Kannada Prabha

ಸಾರಾಂಶ

ವಿದ್ಯಾರ್ಥಿ ದಿಸೆಯ ನಂತರವೂ ಕೂಡ ತಾರ್ಕಿಕ ನೆಲೆಗಟ್ಟಿನಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆಗೆ ಬಾಂಧವ್ಯ ಗಟ್ಟಿಯಾಗಿರಬೇಕು. ಇಂತಹ ಪ್ರವೃತ್ತಿ ಹೆಚ್ಚು ಹೆಚ್ಚು ಪಸರಿಸ ತೊಡಗಿದಾಗ ಮಾತ್ರ ಜಡ್ಡುಗಟ್ಟಿರುವ ಸಮಾಜವನ್ನು ಸರಿಪಡಿಸುವಲ್ಲಿ ನಮ್ಮದು ಅಳಿಲು ಸೇವೆ ಎಂದರೆ ತಪ್ಪಾಗಲಾರದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನಡುವಿನ ಬಾಂಧವ್ಯ ಕೇವಲ ಕಾಲೇಜು ದಿನಗಳಿಗೆ ಸೀಮಿತವಾಗದೇ ಕಾಲೇಜಿನ ವ್ಯಾಸಂಗದ ನಂತರವೂ ಮುಂದುವರೆಯಬೇಕು ಎಂದು ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಬೆಳ್ಳೂರಿನ ಅಂತಾರಾಷ್ಟ್ರೀಯ ಯೋಗ ಪಟು ಹಾಗೂ ಯೋಗಸೇವಾರತ್ನ ಪ್ರಶಸ್ತಿ ಪುರಸ್ಕೃತ ಕಿಶೋರ್ ಬೆಟ್ಟೇಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅನೇಕ ಸ್ತರಗಳಲ್ಲಿ ಸಾಧನೆಗೆ ಭಾಜನರಾಗಿದ್ದಾರೆ. ಅಂತಹ ಸಾಧಕ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಸಂಪರ್ಕ ಸಾಧಿಸಿ, ಅವರ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದಾಗ ಉಪನ್ಯಾಸ ವೃತ್ತಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.

ವಿದ್ಯಾರ್ಥಿಗಳ ಬಗೆಗೆ ಕಾಳಜಿ ವಹಿಸುವ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಆಯಾ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.

ವಿದ್ಯಾರ್ಥಿ ದಿಸೆಯ ನಂತರವೂ ಕೂಡ ತಾರ್ಕಿಕ ನೆಲೆಗಟ್ಟಿನಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆಗೆ ಬಾಂಧವ್ಯ ಗಟ್ಟಿಯಾಗಿರಬೇಕು. ಇಂತಹ ಪ್ರವೃತ್ತಿ ಹೆಚ್ಚು ಹೆಚ್ಚು ಪಸರಿಸ ತೊಡಗಿದಾಗ ಮಾತ್ರ ಜಡ್ಡುಗಟ್ಟಿರುವ ಸಮಾಜವನ್ನು ಸರಿಪಡಿಸುವಲ್ಲಿ ನಮ್ಮದು ಅಳಿಲು ಸೇವೆ ಎಂದರೆ ತಪ್ಪಾಗಲಾರದು ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಎಚ್.ಆರ್.ತ್ರಿವೇಣಿ ಮಾತನಾಡಿ, ಪ್ರಸ್ತುತ ನಶಿಸುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಉಪನ್ಯಾಸಕರ ಆದ್ಯತೆ ಪ್ರಥಮ ಸಾಲಿನದ್ದಾಗಿರಬೇಕು. ಬೋಧನಾ ಸಮಯವನ್ನು ಹೊರತುಪಡಿಸಿದ ನಂತರವೂ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಅನುಸರಿಸುತ್ತಾರೆ. ಈ ನಿಟ್ಟಿನಲ್ಲಿ ನಾವು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರ ಬದುಕು ಹಸನಾಗಲು ಮಾರ್ಗದರ್ಶನ ನೀಡಬೇಕಿದೆ ಎಂದು ಸಲಹೆ ನೀಡಿದರು.

ಹಿರಿಯ ವಿದ್ಯಾರ್ಥಿ ಕಿಶೋರ್ ಬೆಟ್ಟೇಗೌಡ ಕಾಲೇಜು ದಿನಗಳಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕುರಿತು ಮೆಚ್ಚುಗೆಯ ನುಡಿಗಳಾಡಿದರು.

ಗ್ರಂಥಾಲಯ ಸಹಾಯಕ ಎನ್.ಟಿ.ವಿಜಯ್ ಕುಮಾರ್ ಯೋಗಸೇವಾರತ್ನ ಪ್ರಶಸ್ತಿ ಪುರಸ್ಕೃತ ಕಿಶೋರ್ ಬೆಟ್ಟೇಗೌಡ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಶಸ್ತಿ ಪುರಸ್ಕೃತ ಕಿಶೋರ್ ಬೆಟ್ಟೇಗೌಡ ತಮ್ಮ ಕಾಲೇಜು ದಿನಗಳ ಬಗೆಗಿನ ನೆನಪುಗಳನ್ನು ಮೆಲುಕು ಹಾಕುತ್ತಾ ತಮಗೆ ಮಾರ್ಗದರ್ಶನ ನೀಡಿದ ಉಪನ್ಯಾಸಕರನ್ನು ಭಾವನಾತ್ಮಕವಾಗಿ ಸ್ಮರಿಸಿಕೊಂಡರು.

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಕಚೇರಿ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ