ಬಳ್ಳಾರಿ: ಆಹಾರ ಭದ್ರತೆ ಒದಗಿಸಲು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ನಾಡಿನ ಓದುಗರಿಗೆ ಅತ್ಯುತ್ತಮ ಕೃತಿಗಳನ್ನು ತಲುಪಿಸಲು ಪುಸ್ತಕ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವಂತಾಗಬೇಕು ಎಂದು ಹಿರಿಯ ಕಥೆಗಾರ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಅಮರೇಶ ನುಗಡೋಣಿ ಒತ್ತಾಯಿಸಿದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಡಾ.ಬಿ.ಆರ್. ಅಂಬೇಡ್ಕರ್ ವಿಚಾರಗಳನ್ನು ಬಹುಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಗ್ರಂಥಾಲಯಗಳನ್ನು ಆರಂಭಿಸಿದರು. ಆಗ ಜಿಲ್ಲೆಗೊಂದರಂತೆ ಗ್ರಂಥಾಲಯಗಳು ಆರಂಭಗೊಂಡವು. ಅರಸು ಅವರು ಗ್ರಂಥಾಲಯದ ಅಗತ್ಯತೆಯನ್ನು ಅರಿತು ಪುಸ್ತಕಗಳು ಓದುಗರಿಗೆ ಕೈಗೆ ಸಿಗುವ ವ್ಯವಸ್ಥೆಯನ್ನು ಕೈಗೊಂಡರು. ಈಗಿನ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಿರುವಂತೆಯೇ ಪುಸ್ತಕಭಾಗ್ಯ ಯೋಜನೆಯನ್ನೂ ಜಾರಿ ಮಾಡಲಿ. ಅದನ್ನು ಹೇಗೆ ಮಾಡಬೇಕು. ಅದರ ಜವಾಬ್ದಾರಿಯನ್ನು ಯಾರಿಗೆ ಒಪ್ಪಿಸಬೇಕು. ಯಾವ ಸಾಹಿತ್ಯವನ್ನು ಜನರಿಗೆ ತಲುಪಿಸಬೇಕು ಎಂಬಿತ್ಯಾದಿ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಿ. ಇದರಿಂದ ಪ್ರಕಾಶಕರು ಹಾಗೂ ಓದುಗರಿಗೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ ಎಂದರಲ್ಲದೆ, ಪುಸ್ತಕಭಾಗ್ಯ ಯೋಜನೆ ಅಧಿಕಾರಿಗಳ ಕೈಗೆ ಸಿಲುಕಿ ವಿತರಿಸುವ ಕಾಲಕ್ಕೆ ಸಡಿಲಗೊಂಡು ಯಾರಿಗೂ ತಲುಪದ ಹಾಗೆ ಮಧ್ಯಂತರದಲ್ಲಿ ಅಧಿಕಾರಿಗಳ ಬಾಯಿಗೆ ಹೋಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಪ್ರಕಾಶಕ, ಲೇಖಕ ಹಾಗೂ ಓದುಗನ ಅತ್ಯುತ್ತಮ ಸಂಯೋಗದಿಂದ ಮಾತ್ರ ಉತ್ತಮ ಪುಸ್ತಕ ಹೊರತರಲು ಸಾಧ್ಯ. ಈ ಮೂವರ ಅನ್ಯೋನ್ಯ ರೀತಿಯ ಸಂಬಂಧ ಏರ್ಪಾಡುಗೊಳ್ಳುವುದರಿಂದ ಮಾತ್ರ ಕರ್ನಾಟಕದಲ್ಲಿ ಪುಸ್ತಕ ರೂಪಿಸುವ ಕಾರ್ಯ ಸಂಯೋಗಗೊಂಡು ಅತ್ಯುತ್ತಮ ಕೃತಿಗಳು ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಪುಸ್ತಕ ಮುದ್ರಣ, ಹಂಚಿಕೆ ಈ ಹಿಂದೆ ಸೇವೆಯಾಗಿತ್ತು. ಇದೀಗ ಉದ್ಯಮವಾಗಿ ಬದಲಾಗಿದೆ. ಗ್ರಂಥಾಲಯಗಳಿಗೆ ಪುಸ್ತಕ ಪೂರೈಕೆ ವಿಚಾರದಲ್ಲಿ ಆಡಳಿತಾರೂಢ ಸರ್ಕಾರಗಳ ಉದಾಸೀನತೆ ಹೆಚ್ಚಾಗಿದೆ. ಕಳೆದ 7 ವರ್ಷಗಳಿಂದ ಪ್ರಕಾಶಕರ, ಲೇಖಕರ ಪುಸ್ತಕಗಳನ್ನು ಖರೀದಿಸುವ ಕೆಲಸವಾಗಿಲ್ಲ. ಸರ್ಕಾರ ಪುಸ್ತಕ ಸಂಸ್ಕೃತಿಯನ್ನು ಯಾವ ರೀತಿ ತೆಗೆದುಕೊಂಡಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಡಾ.ನುಗಡೋಣಿ ಬೇಸರ ವ್ಯಕ್ತಪಡಿಸಿದರು.ಪ್ರಕಾಶಕರನ್ನು ಬದುಕಿಸುವ ಕೆಲಸವಾಗಲಿ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತ್ಯ ಲೋಕಕ್ಕೆ ಬಳ್ಳಾರಿ ಜಿಲ್ಲೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ವಿಶ್ವವಿದ್ಯಾಲಯಗಳು ಮುದ್ರಣದೋಷವಿಲ್ಲದೆ ಪುಸ್ತಕಗಳನ್ನು ಮುದ್ರಿಸುವುದು ಬಹುಮುಖ್ಯ. ಈ ಬಗ್ಗೆ ಪ್ರಸಾರಾಂಗ ವಿಭಾಗವು ಗಮನ ಹರಿಸಬೇಕು ಎಂದು ಹೇಳಿದರು. ನಾಡಿನ ಅನೇಕ ಪ್ರಕಾಶಕರು ಗ್ರಂಥಾಲಯಗಳನ್ನು ನಂಬಿಕೊಂಡಿದ್ದಾರೆ. ಸರ್ಕಾರ ಪುಸ್ತಕ ಖರೀದಿಸುವ ಪ್ರಕ್ರಿಯೆಗೆ ಮುಂದಾಗಬೇಕು. ಗ್ರಂಥಾಲಯ ತೆರಿಗೆ (ಸೆಸ್) ಹಣ 700 ಕೋಟಿ ರು.ಗಳಿಷ್ಟಿದ್ದು ಇದೇ ಹಣವನ್ನು ಬಳಸಿದರೂ ಪ್ರಕಾಶಕರು ಬದುಕಿಕೊಳ್ಳುತ್ತಾರೆ. ಪ್ರಕಾಶಕರ ಹಿತ ಕಾಯಲು ಸರ್ಕಾರ ಮುಂದಾಗಬೇಕು. ಕೇರಳ ಮಾದರಿಯಲ್ಲಿ ಲೇಖಕರಿಗೆ ಹೆಚ್ಚಿನ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು, ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಪರೀಕ್ಷೆಯ ಕೊನೆ ದಿನಗಳಲ್ಲಿ ಪುಸ್ತಕ ಹಿಡಿಯುತ್ತಾರೆ. ಶಿಕ್ಷಕರು ಸಹ ಇದಕ್ಕೆ ಹೊರತಲ್ಲ. ಎರಡು ತಾಸು ಪಾಠ ಮಾಡಿ ಮನೆಗೆ ಕಳುಹಿಸುವ ಪದ್ಧತಿ ಶುರುವಿಟ್ಟುಕೊಂಡಿದ್ದಾರೆ ಎಂದು ದೂರಿದರಲ್ಲದೆ, ವಿದ್ಯಾರ್ಥಿಗಳು ಕಥೆ, ಕಾವ್ಯ, ಕಾದಂಬರಿ ಬರೆಯುವ ಆಸಕ್ತಿ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬರೆದ ಸಾಹಿತ್ಯ ಪ್ರಕಾರವನ್ನು ವಿವಿಯ ಪ್ರಸಾರಾಂಗದಿಂದಲೇ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು. ಕುಲಸಚಿವ ಎನ್.ಎಂ.ಸಾಲಿ ಮಾತನಾಡಿದರು. ವಿವಿಯ ಪ್ರಸಾರಾಂಗದ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ.ತಿಪ್ಪೇರುದ್ರ ಅವರು ಪ್ರಾಸ್ತಾವಿಕ ಮಾತನಾಡಿದರು. ಸಿಂಡಿಕೇಟ್ ಸದಸ್ಯರಾದ ಪೀರ್‌ಬಾಷಾ, ಕೆ.ಶಿವಕುಮಾರ್, ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ನ.ರವಿಕುಮಾರ್ , ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪ ತಾಳೂರು ಉಪಸ್ಥಿತರಿದ್ದರು. ನಾಟಕ ವಿಭಾಗದ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಪ್ರೊ ಅರುಣ್‌ಕುಮಾರ್ ಲಗಶೆಟ್ಟಿ ಹಾಗೂ ಡಾ ಶಶಿಧರ್ ಕೆಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ಪ್ರಕಾಶಕರು, ಚಿಂತಕರು, ಉಪನ್ಯಾಸಕರುಗಳು, ವಿವಿಯ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.