-ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಕೆಂಭಾವಿ
ಪುರಸಭೆಯಲ್ಲಿ ನೂತನ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು.2025ರ ಆರು ತಿಂಗಳ ಆದಾಯ ಮತ್ತು ಖರ್ಚು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳ ವತಿಯಿಂದ ನಡೆದ ನಿರಂತರ ನೀರು ಪೂರೈಕೆ ಕಾಮಗಾರಿ ಹಾಗೂ 8 ಮತ್ತು 14ನೇ ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣದ ಕುರಿತ ವಿಷಯ ಸೇರಿದಂತೆ ಹಲವು ವಿಷಯಗಳ ಮೇಲೆ ಕಾವೇರಿದ ಚರ್ಚೆಗಳು ನಡೆದವು.
ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಎರಡು ವಾರ್ಡ್‌ಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದು ಶೀಘ್ರದಲ್ಲೆ ಸಮಸ್ಯೆ ಬಗೆಹರಿಸಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸದಸ್ಯ ರವಿ ಸೊನ್ನದ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ನಿರಂತರ ನೀರು ಪೂರೈಕೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈಗಾಗಲೆ ಕೆಲವು ಕಡೆ ನಿರಂತರ ನೀರಿನ ಪ್ರಯೋಗಿಕ ಪರೀಕ್ಷೆ ಮುಗಿದು ಯಶಸ್ಸು ಕಂಡಿದ್ದು ಹಲವು ವಾರ್ಡಗಳಲ್ಲಿ ಇನ್ನೂ ನೀರು ಬಾರದೆ ಇರುವುದಕ್ಕೆ ಕಾರಣ ಕೇಳಿದರು. ಪಟ್ಟಣದಲ್ಲಿ ಆಯುಷ್ ಆಸ್ಪತ್ರೆ ಮಂಜೂರಾಗಿದ್ದು ಆಸ್ಪತ್ರೆ ನಿರ್ಮಾಣಕ್ಕೆ ಸಿಎ ಸೈಟ್ ಸ್ಥಳ ಒದಗಿಸುವಂತೆ ಕೇಳಿದರು.
ಪುರಸಭೆಯಲ್ಲಿ ಎರಡು ಜೆಸಿಬಿ ಯಂತ್ರಗಳಿದ್ದರೂ ಅವುಗಳ ದುರಸ್ತಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಅವುಗಳು ಕಾರ್ಯನಿರ್ವಹಿಸದೆ ಪೊಲೀಸ್ ಠಾಣೆಯಲ್ಲಿ ನಿಂತಿರುವುದು ಯಾಕೆ ಎಂದು ಪ್ರಶ್ನಿಸಿದರು. ಗಣರಾಜ್ಯೋತ್ವವ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ಯಾವ ರೀತಿ ಪ್ರೋತ್ಸಾಹ ನೀಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ಬೇಗಂ ಬೀ ಹಾಗೂ ಸಂಗಮ್ಮ ಯರಗಲ್, ಒಳಚರಂಡಿ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಇಲ್ಲಿಯವರೆಗೂ ಕಾಮಗಾರಿ ನೆರವೇರಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ನಗರ ನೀರು ಸರಬರಾಜು ಮಂಡಳಿಯ ಎಇಇ ಶಂಕರಗೌಡ, ಪರಿಸರ ಅಭಿಯಂತರ ಜ್ಯೋತಿಶ್ರೀ, ಜೆಇ ಮಲ್ಲಿಕಾರ್ಜುನ, ಸುರೇಂದ್ರ ಸೇರಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿದ್ದರು. ಸಿದ್ರಾಮಯ್ಯ ಇಂಡಿ ಸ್ವಾಗತಿಸಿದರು, ಭೀಮಣ್ಣ ವಂದಿಸಿದರು.
ಕೋಟ್-1 : ನಾನು ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲನೆ ಸಭೆ ಆಗಿದೆ. ಬಂದ ಅನುದಾನ ಜನತೆಯ ಅಭಿವೃದ್ಧಿಗೆ ಉಪಯೋಗವಾಗಬೇಕೆಂಬುದೆ ನನ್ನ ಉದ್ದೇಶ. ಈ ಕುರಿತು ಶೀಘ್ರದಲ್ಲೆ ಪುರಸಭೆಯ ಎಲ್ಲ ಅಧಿಕಾರಿಗಳ ಮತ್ತು ಸಿಬ್ಬಂದಿ ಸಭೆ ಕರೆದು ಮೂಲಭೂತ ಸೌಕರ್ಯ ಮತ್ತು ಸ್ವಚ್ಚತೆ ಕಾಪಾಡುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ.
-
ಕೋಟ್-2 : ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದ್ದು ಬಂದ ಅನುದಾನ ಸಂಪೂರ್ಣ ಪೋಲಾಗಿ ಅವ್ಯವಹಾರದ ಛಾಯೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರಭಾರಿ ಆಗಿ ಕೆಲಸ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿಗಳಿಂದ ಇಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಒಂದೆ ಎಲೆಕ್ಟ್ರಿಕಲ್ ಅಂಗಡಿಗೆ ಹಲವು ಬಾರಿ ಬಿಲ್ ಪಾವತಿಸಿರುವುದು, ಜೆಸಿಬಿ ಯಂತ್ರ ದುರಸ್ತಿಯಲ್ಲಿ ಗೋಲಮಾಲ್ ಹಲವು ಹಗರಣ ಕಂಡು ಬರುತ್ತಿದ್ದು ಕೋಟಿಗಟ್ಟಲೆ ಅನುದಾನ ದುರ್ಬಳಕೆಯಾದ ಲಕ್ಷಣಗಳು ಗೋಚರಿಸುತ್ತಿವೆ.- ಪರಶುರಾಮ ಬಳಬಟ್ಟಿ. ನಾಮನಿರ್ದೇಶಿತ ಸದಸ್ಯ.
-17ವೈಡಿಆರ್9 :
ಕೆಂಭಾವಿ ಪುರಸಭೆಯಲ್ಲಿ ನೂತನ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಮೊಹ್ಮದ್ ಯುಸೂಫ್, ಶಂಕರಗೌಡ, ಮಲ್ಲಿಕಾರ್ಜುನ ಇದ್ದರು.